ಸಮಗ್ರ ನ್ಯೂಸ್: 24ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಸೈನಿಕರ ಆತ್ಮಗಳಿಗೆ ಜು.26 ರಂದು ಮೇರಿಹಿಲ್ನ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ರವರು ಪ್ರಾಣವನ್ನೇ ತೆತ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಆ ಸಮಯದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿಯವರು ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿರುವ ಸಮಯದಲ್ಲಿ ಪಾಪಿ ಪಾಕಿಸ್ತಾನ ಕಾರ್ಗಿಲ್ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ಕಳುಹಿಸಿ ಆಕ್ರಮಣ ಮಾಡಿದ್ದರು. ಮೇ 5 ರಂದು ಕಾರ್ಗಿಲ್ ಯುದ್ಧ ಆರಂಭವಾಗಿ ಜುಲೈ 26 ರಂದು ಕೊನೆಗೊಂಡಿರುತ್ತದೆ, ಒಟ್ಟು 74 ದಿನಗಳ ಕಾರ್ಗಿಲ್ ಕದನದಲ್ಲಿ ಭಾರತದ 2,00,000 ಸೈನಿಕರು ದೇಶಕ್ಕಾಗಿ ಕಿಚ್ಚೆದೆಯಿಂದ ಹೋರಾಡಿದ್ದು, ಸುಮಾರು 500ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿ ಹುತಾತ್ಮರಾದರು. ಆಪರೇಷನ್ ವಿಜಯ್ ಮುಖಾಂತರ ಭಾರತದ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿದ ಸವಿನೆನಪಿಗಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ದೇಶದೆಲ್ಲೆಡೆ ಆಚರಿಸಿ ದೇಶಕ್ಕೆ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ದೇಶ ಸೇವೆಗಾಗಿ ಪುನರ್ ಸಮರ್ಪಿಸುವ ವಿಶೇಷ ದಿನ ಎಂದು ಅವರು ಅಭಿಪ್ರಾಯಪಟ್ಟರು ಹಾಗೂ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲ ಹಾರೈಸೋಣ ಎಂದು ನುಡಿದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ವೈದ್ಯರಾದ ಡಾ|| ಕಿಶನ್ ರಾವ್ ಬಾಳಿಲ ಅವರು ದೇಶಕ್ಕಾಗಿ ಅದೇಷ್ಟೋ ಜನ ಸೈನಿಕರು ಪ್ರಾಣವನ್ನೇ ಭಾರತ ಮಾತೆಗೆ ಅರ್ಪಿಸಿದ್ದರು. ಗೃಹರಕ್ಷಕರಿಗೂ ಯೋಧರಿಗೂ ಯಾವುದೇ ವ್ಯತ್ಯಾಸವಿಲ್ಲ. ಯೋಧರು ಕಾಶ್ಮೀರದ ಗಡಿಯಲ್ಲಿ ಭಾರತೀಯರನ್ನು ಕಾಯುವ ಹಾಗೆ ಗೃಹರಕ್ಷಕರು ಪ್ರವಾಹ ರಕ್ಷಣಾ ಸಮಯದಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಜನರನ್ನು ರಕ್ಷಿಸುವ ಇವರ ಸೇವೆಯೂ ಶ್ಲಾಘನೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ರಮೇಶ್, ಸಹಾಯಕ ಆಡಳಿತಾಧಿಕಾರಿ ಕವಿತಾ ಕೆ.ಸಿ, ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ, ಉಡುಪಿ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್. ಮತ್ತು ಮೀನಾಕ್ಷಿ, ಹಿರಿಯ ಗೃಹರಕ್ಷಕ ಸುನಿಲ್ ಕುಮಾರ್, ಸುನಿಲ್ ಪೂಜಾರಿ, ದಿವಾಕರ್, ಕೇಶವ ಶೆಟ್ಟಿಗಾರ್, ಧನಂಜಯ್, ಕನಕಪ್ಪ, ಜ್ಞಾನೇಶ್, ಪ್ರಸಾದ್, ನಿಖಿಲ್, ಸಂದೇಶ್, ಸಂತೋಷ್, ನವಿನ್, ಸುಲೋಚನಾ, ಜಯಲಕ್ಷ್ಮೀ ಉಪಸ್ಥಿತರಿದ್ದರು.