ಸಮಗ್ರ ನ್ಯೂಸ್: ‘ತಮಿಳು- ಕನ್ನಡ ಭಾಷೆಗಳಷ್ಟೇ ಪ್ರಾಚೀನವಾದ, ಭಾಷಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಿರುವ ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಲು ಅರ್ಹವಾಗಿದೆ’ ಎಂದು ಖಚಿತ ಆಧಾರಗಳ ಸಹಿತ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆಯ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಬಸವರಾಜ ಬೊಮ್ಮಾಯಿ ನೇತೃತ್ವದ ಈ ಹಿಂದಿನ ಬಿಜೆಪಿ ಸರ್ಕಾರವು ಮೋಹನ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
‘ದ್ರಾವಿಡ ಭಾಷಾ ವರ್ಗದ, ಪ್ರಾಚೀನ, ಸ್ವತಂತ್ರವೂ ಆದ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ದೊರೆತರೆ, ಯುನೆಸ್ಕೋ ವರದಿಯಲ್ಲಿ ನಶಿಸಿ ಹೋಗುತ್ತಿರುವ ಭಾಷಾ ಪಟ್ಟಿಯಲ್ಲಿರುವ ಈ ಭಾಷೆ ಉಳಿಸಿ, ಬೆಳೆಸಿದ ಮತ್ತು ತುಳುವರಿಗೆ ನೈತಿಕ ಧೈರ್ಯ ತುಂಬಿದ ಶ್ರೇಯ ಸರ್ಕಾರದ್ದಾಗುತ್ತದೆ. ತುಳುವಿಗೆ ಸಂಬಂಧಿಸಿದಂತೆ ಅಕ್ಷರಾಭ್ಯಾಸ ಇಲ್ಲದ ತುಳುವರಿಗೆ ಮತ್ತು ದೇಶ ವಿದೇಶಗಳಿಂದ ಬರುವ ತುಳುವರಿಗೆ ಬ್ಯಾಂಕಿಂಗ್ ವ್ಯವಹಾರ, ನ್ಯಾಯಾಂಗ ವ್ಯವಸ್ಥೆ, ವಿವಿಧ ಇಲಾಖೆಗಳೊಂದಿಗೆ ಸಂವಹನ ಸುಲಭವಾಗುತ್ತದೆ. ಇದರಿಂದ ಆಡಳಿತ, ವ್ಯವಹಾರಗಳು ಹೆಚ್ಚು ಜನಸ್ನೇಹಿಯಾಗುತ್ತದೆ’ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ತುಳು ಭಾಷೆಯ ಪ್ರಾಚೀನ- ಆಧುನಿಕ ಸಾಹಿತ್ಯ, ಮೌಖಿಕ ಪರಂಪರೆ, ಹಸ್ತಪ್ರತಿಗಳು, ಇವುಗಳ ಕುರಿತು ನಡೆದಿರುವ ಸಂಶೋಧನೆ, ರಂಗಭೂಮಿ, ಯಕ್ಷಗಾನ, ಸಿನಿಮಾ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಗಳು, ಭಾಷಾ ಬೆಳವಣಿಗೆಗೆ ದುಡಿದಿರುವ ರಾಜ್ಯ, ದೇಶ, ವಿದೇಶಗಳ ವಿದ್ವಾಂಸರು, ಸರ್ಕಾರಿ ಪ್ರಾಯೋಜಿತ ಮತ್ತು ಖಾಸಗಿ ಸಂಘ ಸಂಸ್ಥೆಗಳ ತುಳು ಸಂಬಂಧಿ ಕೆಲಸಗಳನ್ನು ಸೂಕ್ತ ದಾಖಲೆಗಳ ಸಹಿತ ಪರಿಶೀಲಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.