ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿ ಹೆದ್ದಾರಿ ಜಲಾವೃತಗೊಂಡಿದೆ. ಆದರೆ ಮಂಗಳೂರು ವಿ.ವಿ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ಉಕ್ಕಿ ಹರಿದ ಪ್ರವಾಹ ನೀರಿನಲ್ಲಿ ಸಂಚರಿಸಿ ಪರೀಕ್ಷೆಗೆ ಬರೆದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಮಳೆ ಇದ್ದರೂ ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ. ಮಾತ್ರವಲ್ಲದೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದೆ. ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿಗೆ ಪರೀಕ್ಷೆ ಹಾಜರಾಗಲು ಬರುವ ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದಿದ್ದಾರೆ.
ಇಂದು(ಜು.24) ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ ಪದವಿ ವಿದ್ಯಾರ್ಥಿಗಳು ಜೀವ ಭಯದಿಂದಲೇ ಪರೀಕ್ಷೆ ಬರೆದಿದ್ದು ಕಂಡುಬಂದಿದೆ.