ಸಮಗ್ರ ನ್ಯೂಸ್: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 15 ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿರುವ ಘಟನೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ-275ರ ಬಿಳಿಕೆರೆ ಬೈಪಾಸ್‌ನಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ನಿವಾಸಿ ಅಲೀಮ್, ಮನ್ಸೂರ್ ಬಂಧಿತ ಆರೋಪಿಗಳಾಗಿದ್ದು, ಚಾಲಕ ಪರಾರಿಯಾಗಿದ್ದಾನೆ. ಬಿಳಿಕೆರೆ ಠಾಣೆ ಸಬ್ ಇನ್ಸ್ಪೆಕ್ಟರ್ ಚಲುವಯ್ಯ ಸಿಬ್ಬಂದಿಗಳೊಂದಿಗೆ ಶನಿವಾರ ರಾತ್ರಿ 10 ಗಂಟೆಯ ಸಮಯ ರಾತ್ರಿ ಗಸ್ತಿನಲ್ಲಿದ್ದ ವೇಳೆ ಹೆದ್ದಾರಿಯಲ್ಲಿ ಹುಣಸೂರು ಕಡೆಯಿಂದ ಬರುತ್ತಿದ್ದ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ಬಿಳಿಕೆರೆ ಬೈಪಾಸ್ ರಸ್ತೆಯಲ್ಲಿ ತಡೆದು ನಿಲ್ಲಿಸಿದಾಗ ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.
ಗೂಡ್ಸ್ ವಾಹನ ಪರಿಶೀಲನೆ ನಡೆಸಿದ ವೇಳೆ ಹಸುಗಳು, ಎಮ್ಮೆಗಳು, ಇಲಾತಿ ಗಂಡು ಕರುಗಳು ಸೇರಿದಂತೆ 15 ಹಸುಗಳನ್ನು ಯಾವುದೇ ರಹದಾರಿ ಇಲ್ಲದೆ ಮೈಸೂರಿನ ಕಸಾಯಿಖಾನೆಗೆ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದ ಮೇರೆಗೆ ಗೂಡ್ಸ್ ವಾಹನ ಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಅಕ್ರಮ ಜಾನುವಾರು ಸಾಗಾಣಿಕೆ ಪ್ರಕರಣ ದಾಖಲಿಸಿ, ಚಾಲಕನ ಪತ್ತೆಗೆ ಕ್ರಮ ವಹಿಸಲಾಗಿದೆ.