ಸಮಗ್ರ ನ್ಯೂಸ್: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ರವಿವಾರವೂ ಮುಂದುವರಿದಿದ್ದು, ಭಾರೀ ಮಳೆ ಹಲವೆಡೆ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ. ಶನಿವಾರ ರಾತ್ರಿ ಹಾಗೂ ರವಿವಾರ ಇಡೀ ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಕಳಸ ಸಮೀಪದಲ್ಲಿ ಹರಿಯುವ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆ ಪರಿಣಾಮ ತುಂಗಾ ನದಿಯ ನೆರೆ ನೀರು ಶೃಂಗೇರಿ ಪಟ್ಟಣದ ಗಾಂಧಿಮೈದಾನವನ್ನು ಆವರಿಸಿಕೊಂಡಿದೆ. ಇನ್ನು ಅಲ್ಲಲ್ಲಿ ಮರಗಳು ಉರುಳಿ ರಸ್ತೆ ಬಿದ್ದ ಪರಿಣಾಮ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಭಾರೀ ತೊಂದರೆಯಾಗಿದೆ. ಮಲೆನಾಡಿನ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಶನಿವಾರ ರಾತ್ರಿಯಿಂದ ರವಿವಾರ ಇಡೀ ದಿನ ಅಬ್ಬರಿಸಿದ ಪರಿಣಾಮ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಹೇಮಾವತಿ, ಭದ್ರೆ ಹಾಗೂ ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕಳಸ ತಾಲೂಕಿನಾದ್ಯಂತ ಶನಿವಾರ ಹಾಗೂ ರವಿವಾರ ಸುರಿದ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಪಾಯದ ಮಟ್ಟದಲ್ಲಿ ನದಿ ಹರಿಯಲಾರಂಭಿಸಿದೆ.