ಸಮಗ್ರ ವಾರ್ತೆ: ಪುಷ್ಪಗಿರಿ ಪರಿಸರ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ನೀರು ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕುಮಾರಧಾರ ನದಿಯಲ್ಲಿ ನೀರು ಹೆಚ್ಚಳದಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಲಗೇಜ್ ಕೊಠಡಿ, ಶೌಚಾಲಯ ಎಲ್ಲವೂ ಮುಳುಗಡೆಯಾಗಿದೆ.
ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ನದಿಯ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮುಂಜಾಗ್ರತಾ ಹಿನ್ನೆಲೆಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ನದಿ ಸಮೀಪದ ತೋಟಗಳಿಗೂ ನೀರು ನುಗ್ಗಿದೆ. ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಿಸಿಲೆ, ಅಡ್ಡಹೊಳೆ, ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಕೆಲವೆಡೆ ತೋಟಗಳಿಗೆ ನೀರು ನುಗ್ಗಿದ್ದು ಕೃಷಿಹಾನಿ ಸಂಭವಿಸಿದೆ.