ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಗುತ್ತಿಗಾರಿನ ಪಂಚಾಯತ್ ವ್ಯಾಪ್ತಿಯಲ್ಲಿರುವ ವಳಲಂಬೆಯಲ್ಲಿ ಹೆದ್ದಾರಿ ಬದಿರುವ ಬೋರ್ ವೆಲ್ ಕೈಪಂಪ್ ಕಾಣೆಯಾಗಿದೆ ಎನ್ನಲಾಗಿದ್ದು, ಈ ಕುರಿತ ವರದಿಯೊಂದನ್ನು ಪಂಚಾಯತ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಂಡಾತನಿಗೆ ಕರೆಮಾಡಿ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಧಮ್ಕಿ ಹಾಕಿರುವ ಘಟನೆ ನಡೆದಿದ್ದು, ಈ ಕುರಿತ ಆಡಿಯೋ ವೈರಲ್ ಆಗಿದೆ.
ಜಾಲ್ಸೂರು – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಸಿಗುವ ವಳಲಂಬೆ ಎಂಬ ಪ್ರದೇಶದಲ್ಲಿ ಕೆಲದಿನಗಳ ಹಿಂದೆ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಎಂಬವರು ತನ್ನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದರು. ಇದೇ ಸಮಯಕ್ಕೆ ಆ ಜಾಗದ ಪಕ್ಕದಲ್ಲಿದ್ದ ಪಂಚಾಯತ್ ಹ್ಯಾಂಡ್ ಬೋರ್ ವೆಲ್ ಕಾಣೆಯಾಗಿತ್ತು. ಈ ಬಗ್ಗೆ ವೆಬ್ ಮಾಧ್ಯಮವೊಂದು “ಗುತ್ತಿಗಾರಿನಲ್ಲಿ ಬೋರ್ ವೆಲ್ ಕಾಣೆ” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿತ್ತು. ಈ ವರದಿಯನ್ನು ನೋಡಿದ ಗ್ರಾಮಸ್ಥನೋರ್ವ ತಮ್ಮ ಪಂಚಾಯತ್ ನ ವಾಟ್ಸಪ್ ಗ್ರೂಪ್ ಗೆ ಹಾಕಿದ್ದು, ಈ ಕುರಿತು ಹಲವು ಚರ್ಚೆಗಳು ನಡೆದಿದೆ. ಈ ವೇಳೆ ಗ್ರಾಮ ಪಂಚಾಯತ್ ಸದಸ್ಯನಾದ ವೆಂಕಟ್ ವಳಲಂಬೆ ಪಂಚಾಯತ್ ನ ವಾಟ್ಸಪ್ ಗ್ರೂಪ್ ಗೆ ಹಾಕಿದ ವ್ಯಕ್ತಿಗೆ ಕರೆ ಮಾಡಿ ನ್ಯೂಸ್ ಶೇರ್ ಮಾಡಿದಕ್ಕೆ ಧಮ್ಕಿ ಹಾಕಿದ್ದು, ಈ ಬಗ್ಗೆ ಆಡಿಯೋ ಒಂದು ಪಂಚಾಯತ್ ಗ್ರೂಪ್ ನಲ್ಲಿ ಹರಿದಾಡುತ್ತಿದೆ.

ತನ್ನ ಗ್ರಾಮದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುವ ಅಧಿಕಾರ ಇಲ್ಲವೇ..?, ಮಾಧ್ಯಮಗಳಲ್ಲಿ ವರದಿ ಬಂದಿರೋದನ್ನು ಕೇಳಿದಕ್ಕೆ ನೀನೇ ವರದಿ ಮಾಡಿರುವುದಾಗಿ ಹೇಳುವುದು ಎಷ್ಟು ಸರಿ? ತಮ್ಮದೆ ಜನಗಳಿಂದ ಮತ ಪಡೆದು ಜಯ ಗಳಿಸಿ ಪಂಚಾಯತ್ ಸದಸ್ಯನಾದವನಿಗೆ ತಮ್ಮ ಮತದಾರರ ಬಳಿ ಯಾವ ರೀತಿ ಮಾತನಾಡಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಇಲ್ಲವೇ? ಕುಂಬಳ ಕಾಯಿ ಕದ್ದವ ಹೆಗಲು ನೋಡಿದ ಹಾಗೆ ಮಾಡುವುದು ಎಷ್ಟು ಸರಿ.? ಎಂಬ ವಿಚಾರ ಚರ್ಚೆಯಾಗುತ್ತಿದೆ.
ಈ ಬೋರ್ ವೆಲ್ ಕಾಣೆಯಾದ ಬಗ್ಗೆ ಪಿಡಿಓ ಜೊತೆ ಕೇಳಿದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಹೀಗಿರುವಾಗ ಪಂಚಾಯತ್ ಸದಸ್ಯನಾದವನಿಗೆ ತನಗೆ ಬೇಕಾದ ಹಾಗೆ ತಮ್ಮ ವಾರ್ಡ್ ನಲ್ಲಿ ಕೆಲಸ ಮಾಡುವುದು ಸರಿಯಾ? ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕ ವಸ್ತುಗಳನ್ನು ತನ್ನ ಮನೆಯ ವಸ್ತುವೆಂದು ಕೆಡಿಸುವುದು ಸರಿಯಲ್ಲ. ಅಲ್ಲದೆ ಅಲ್ಲಿಂದ ತೆಗೆದ ಬಳಿಕ ಹ್ಯಾಂಡ್ ಬೋರ್ ವೆಲ್ ಪಂಚಾಯತ್ ನಲ್ಲಿ ತೆಗೆದಿಡಬೇಕು, ಅದು ಬಿಟ್ಟು ಪಿಡಿಓ ಅಥವಾ ಪಂಚಾಯತ್ ಆಡಳಿತಕ್ಕೆ ಮಾಹಿತಿ ನೀಡದೆ ತನಗೆ ಬೇಕಾದ ಸ್ಥಳದಲ್ಲಿ ತೆಗೆದಿಡುವುದು ಎಷ್ಟು ಸರಿ?
ಪಂಚಾಯತ್ ಸದಸ್ಯ ಹಾಗೂ ಸಾಮಾನ್ಯ ನಾಗರಿಕನಾದರೂ ಸಾರ್ವಜನಿಕವಾಗಿ ಎಲ್ಲವೂ ಕಾನೂನು ಚೌಕಟ್ಟಿನಲ್ಲೇ ನಡೆಯಬೇಕು, ಸಾರ್ವಜನಿಕರಿಗೆ ಒಂದು ನ್ಯಾಯ, ಪಂಚಾಯತ್ ಸದಸ್ಯನಿಗೆ ಒಂದು ನ್ಯಾಯ ಎಲ್ಲಿವೂ ಇಲ್ಲ, ಹಾಗಾಗಿ ಈ ಬಗ್ಗೆ ಸರಿಯಾದ ತನಿಖೆಯಾಗಿ, ಘಟನೆಗೆ ತಾರ್ಕಿಕ ಅಂತ್ಯ ಸಿಗಬೇಕಿದೆ.
ವರದಿ:- ಜಯದೀಪ್ ಕುದ್ಕುಳಿ