ಸಮಗ್ರ ನ್ಯೂಸ್: ಮಂಗಳೂರು ನಗರದ ಸುಲ್ತಾನ್ ಜ್ಯುವೆಲರಿ ಹಾಗೂ ಹೋಳಿ ಆಚರಣೆ ವೇಳೆ ನಡೆದ ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಮೂವರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಗಡಿಪಾರು ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.
ಇಂದು (ಜು.21) ಮೂವರು ಬಜರಂಗದಳ ಕಾರ್ಯಕರ್ತರಿಗೆ ಕಾನೂನು ಸುವ್ಯವಸ್ಥೆ ಖಾತ್ರಿ ಪಡಿಸಲು ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಬಳಿಕ ಅಧಿಕೃತವಾಗಿ ಒಂದು ವರ್ಷ ಕಾಲ ಗಡಿಪಾರು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್ ಪೆಕ್ಟರ್ ಗಳಿಂದ ಗಡಿಪಾರಿಗೆ ವರದಿಯನ್ನು ಕೇಳಲಾಗಿದೆ.
ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮಾತನಾಡಿ, ನಮ್ಮ ನಗರದಲ್ಲಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಆಗಿದೆ. ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ. ಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಲಾಗಿದೆ. ನೈತಿಕ ಪೊಲೀಸ್ ಗಿರಿ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ಅವರನ್ನ ಗಡೀಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟೀಸ್ ಮಾಡಿದ್ದೇವೆ, ಗಡಿಪಾರು ಪ್ರಕ್ರಿಯೆ ಆಗಲಿದೆ. ರೌಡಿಶೀಟ್ ತೆರೆಯೋದು ಅಥವಾ ಗೂಂಡಾ ಕಾಯ್ದೆ ಹಾಕುವ ಕೆಲಸವೂ ಆಗುತ್ತಿದೆ. ನಿರಂತರ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವರನ್ನು ಗುರುತಿಸಿದ್ದೇವೆ ಎಂದು ತಿಳಿಸಿದರು.