ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುವುದಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ವ್ಯಕ್ತಿಯೋರ್ವರು ಜು.18 ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರುವಾಜೆ ಗ್ರಾಮದ ಪೆಲತಡ್ಕ ನಿವಾಸಿ ದಾಮೋದರ ನಾಯ್ಕ ಎಂಬವರ ಮನೆ ಸಮೀಪ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಯುತ್ತಿದ್ದು , ಮನೆಯ ಜಮೀನಿನ ಬೇಲಿಯು ಅರ್ಧದಷ್ಟು ನಾಶವಾಗಿದ್ದು ಈ ಬಗ್ಗೆ ಕಾಮಗಾರಿ ಉಸ್ತುವಾರಿ ವಹಿಸಿದ ಪೆರುವಾಜೆ ಗ್ರಾಮದ ಮುರ್ಕೆತ್ತಿ ವಾರ್ಡ್ ಸದಸ್ಯ ಸಚಿನ್ ರಾಜ್ ಶೆಟ್ಟಿಯಲ್ಲಿ ತಿಳಿಸಿದರೆನ್ನಲಾಗಿದೆ. ಆಗ ಸಚಿನ್ ರಾಜ್ ಶೆಟ್ಟಿಯವರು ಇದನ್ನು ನಾನು ಸರಿಪಡಿಸುವುದಿಲ್ಲ ನೀನು ಏನು ಬೇಕಾದರೂ ಮಾಡಿಕೋ ಎಂದು ಉತ್ತರಿಸಿದರೆನ್ನಲಾಗಿದೆ.
ಆಗ ಮಾತಿಗೆ ಮಾತು ಬೆಳೆದು ಬಳಿಕ ,ಜಾತಿ ನಿಂದನೆ ಗೈದಿದ್ದು ,ನೀನು ನಿನ್ನ ಜಾತಿ ಸಂಘಟನೆಗೆ ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನೀನು ಒಂದೇ ಅಪ್ಪನಿಗೆ ಹುಟ್ಟಿದರೆ ನೀನು ನನ್ನಲ್ಲಿ ನೇರವಾಗಿ ಮಾತನಾಡು” ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದಿದ್ದು, ಬಳಿಕ ಸಚಿನ್‌ರಾಜ್ ಶೆಟ್ಟಿಯು ಪಕ್ಕದ ಮನೆಯ ಪೂರ್ಣಿಮಾ ಎಂಬವರನ್ನು ನೋಡಿ ನಿನಗೆ ಮನೆ ನಾನು ಕಟ್ಟಿಸಿ ಕೊಟ್ಟಿರುವುದು. ನೀವೆಲ್ಲ ಇವರೊಂದಿಗೆ ಸೇರಿದರೆ ನಿನ್ನ ಮನೆ ಮತ್ತು ಕೆಲಸವನ್ನು ನಾನು ತೆಗೆಸುತ್ತೇನೆ ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಾಮೋದರ ನಾಯ್ಕ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಸಚಿನ್ ರಾಜ್ ಶೆಟ್ಟಿ ವಿರುದ್ಧ ಕಲಂ 504, 506 ಐಪಿಸಿ ಮತ್ತು The SC & ST Act 2015 (U/s-3(1) (r) (s) 3(2)(VA) ರಂತೆ ಪ್ರಕರಣ ದಾಖಲಾಗಿದೆ.