ಸಮಗ್ರ ನ್ಯೂಸ್: ಎಸ್‌ಟಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮಣಿಪುರದಲ್ಲಿ ಎರಡು ಜನಾಂಗಗಳ ನಡುವೆ ಹಿಂಸಾಚಾರ ಆರಂಭವಾದಾಗಿನಿಂದ ಪ್ರಧಾನಿ ಮೋದಿಯವರು ಈ ಕುರಿತು ಮಾತನಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಎಷ್ಟೇ ಟೀಕೆಗಳು ಬಂದರೂ ಮೌನಹಿಸಿದ್ದ ಪ್ರಧಾನಿ ಮೋದಿಯವರು 77 ದಿನಗಳ ನಂತರ ಮೌನ ಮುರಿದಿದ್ದು, “ಈ ಘಟನೆಗಳಿಂದ ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ” ಎಂದಿದ್ದಾರೆ.
ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರದ ವಿಡಿಯೋ ಬಹಿರಂಗಗೊಂಡ ನಂತರ ಮಾತನಾಡಿರುವ ಅವರು, “ಮಣಿಪುರದ ಘಟನೆಯು ಮುನ್ನೆಲೆಗೆ ಬಂದಿರುವುದು ಯಾವುದೇ ನಾಗರಿಕತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ದೇಶ ನಾಚಿಕೆಪಡುವಂತಾಗಿದೆ. ಅಪರಾಧದ ವಿರುದ್ಧ ವಿಶೇಷವಾಗಿ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನುಗಳನ್ನು ಬಲಪಡಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಘಟನೆಯು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರದಿಂದ ಆಗಿರಬಹುದು, ಅಪರಾಧಿ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಶಿಕ್ಷೆಯಿಂದ ಮುಕ್ತವಾಗಬಾರದು” ಎಂದು ಪ್ರಧಾನಿ ಮೋದಿ ಹೇಳಿದರು.
ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ, ಯಾವುದೇ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಣಿಪುರದ ಹೆಣ್ಣುಮಕ್ಕಳಿಗೆ ಏನಾಯಿತು ಎಂಬುದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.