ಸಮಗ್ರ ನ್ಯೂಸ್: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ರಾಜ್ಯದಲ್ಲಿ ಅರಾಜಕತೆ ಮತ್ತು ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಸುಳ್ಯದ ಮಿನಿ ವಿಧಾನ ಸೌಧದ ಎದುರು ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಶನಿವಾರ ಪ್ರತಿಭಟನಾ ಸಭೆ ನಡೆಸಲಾಯಿತು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 55 ದಿನಗಳಲ್ಲೇ ರಾಜ್ಯದಲ್ಲಿ ಅರಾಜಕತೆ, ದುರಾಡಳಿತ ಸೃಷ್ಟಿಯಾಗಿದೆ. ಐದು ಗ್ಯಾರಂಟಿಯನ್ನು ನಂಬಿಕೊಂಡು ಜನ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದರು. ಆದರೆ ಸರಕಾರ ಜನರ ನಿರೀಕ್ಷೆಯನ್ನು, ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ವ್ಯವಸ್ಥೆ ಹದಗೆಟ್ಟಿದೆ, ಜೈನಮುನಿ ಹತ್ಯೆ, ಬೆಂಗಳೂರಿನಲ್ಲಿ ಜೋಡಿ ಕೊಲೆ, ಮೈಸೂರಿನಲ್ಲಿ ಯುವಕನ ಕೊಲೆ ನಡೆದಿರುವುದೇ ಇದಕ್ಕೆ ಸಾಕ್ಷಿ. ಜೈನ ಮುನಿ ಹತ್ಯೆಯ ಸರಿಯಾದ ತನಿಖೆ ನಡೆಸದೆ ಕೆಲವೇ ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ದೂರಿದರು. ಕೂಡಲೇ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು ಎಂದ ಅವರು ಹವಾಮಾನ ಆಧರಿತ ಬೆಳೆ ವಿಮೆಯಲ್ಲಿ ಕೆಲ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಮಾಡುತ್ತಿದೆ. ಒಂದು ವಾರದೊಳಗೆ ಬೆಳೆ ವಿಮೆ ಜಾರಿಗೊಳಿಸಬೇಕು, ಅಡಿಕೆ, ಕಾಳುಮೆಣಸು ಸೇರಿಸಬೇಕು ಇಲ್ಲವೇ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸದರು.
ಎಸ್.ಎನ್.ಮನ್ಮಥ ಮಾತನಾಡಿ, ಕಾಂಗ್ರೆಸ್ ನೀಡಿದ ಭರವಸೆಯನ್ನು ಮೊದಲು ಈಡೇರಿಸಬೇಕು. ಸಿದ್ದರಾಮಯ್ಯ ನೇತೃತ್ವದ ಸರಕಾರ ಕರ್ನಾಟಕವನ್ನು ದಿವಾಳಿ ಮಾಡುವ ಚಿಂತನೆ ಅವರಲ್ಲಿದೆ. ದೂರದೃಷ್ಟಿ ಇಲ್ಲದೆ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರಾದ ವಿನಯಕುಮಾರ್ ಕಂದಡ್ಕ, ಎ.ವಿ.ತೀರ್ಥರಾಮ, ವೆಂಕಟ ವಳಲಂಬೆ, ಡಾ.ರಾಮಯ್ಯ ಭಟ್, ಚಂದ್ರ ಕೋಲ್ಚಾರ್, ಮಹೇಶ್ ರೈ ಮೇನಾಲ, ಸಂತೋಷ್ ಕುತ್ತಮೊಟ್ಟೆ, ಸತ್ಯಾವತಿ ಅಜ್ಜಾವರ, ಹರಿಣಿ ದೇರಾಜೆ, ಗುರಿದತ್ ನಾಯಕ್, ಪಿ.ಕೆ.ಉಮೇಶ್, ಬುದ್ಧ ನಾಯ್ಕ, ಜಯರಾಜ್ ಕುಕ್ಕೆಟ್ಟಿ, ಎ.ಟಿ.ಕುಸುಮಾಧರ ಸೇರಿದಂತೆ ಬಿಜೆಪಿ ನಾಯಕರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಕಾಂಗ್ರೆಸ್ ವಿರುದ್ಧ ದಿಕ್ಕಾರ, ಘೋಷಣೆ ಕೂಗಲಾಯಿತು.