ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಡಾನೆ ದಾಳಿಗೆ ತೋಟದಲ್ಲಿ ಮೇಯಲು ಕಟ್ಟಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೂಡಿಗೆ ಗ್ರಾಮದ ಬೋಬೇಗೌಡ ಅವರ ತೋಟದಲ್ಲಿ ಹಾಡುಹಗಲೇ ಕಾಡಾನೆ ದಾಳಿ ಮಾಡಿದೆ.
ತೋಟದಲ್ಲಿದ್ದ ಬಾಳೆಗಿಡವನ್ನ ಸಂಪೂರ್ಣ ನಾಶ ಮಾಡಿದ್ದು ಇನ್ನು ಅಡಿಕೆ ಹಾಗೂ ತೆಂಗಿನ ಮರಗಳನ್ನ ಬುಡಸಮೇತ ಕಿತ್ತು ಹಾಕಿದೆ. ತೋಟದಲ್ಲಿ ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೂ ಕಾಡಾನೆ ದಾಳಿ ಮಾಡಿದ್ದು ಹಸು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ. ಆನೆ ಬಂದ ಕೂಡಲೇ ಹಸು ಓಡಲು ಪ್ರಯತ್ನಿಸಿದರು, ತೋಟದ ಮಾಲೀಕ ಹಸುವನ್ನ ಕಟ್ಟಿಹಾಕಿದ್ದ ಪರಿಣಾಮ ಹಸು ಓಡಿಹೋಗಲು ಸಾಧ್ಯವಾಗಿಲ್ಲ. ಇದರಿಂದ ಹಸು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ. ತೋಟದಲ್ಲಿ ಆನೆಯನ್ನ ಕಂಡ ಕೂಡಲೇ ತೋಟದ ಮಾಲೀಕ ಹಾಗೂ ಅಕ್ಕಪಕ್ಕದ ಸ್ಥಳಿಯರು ಕೂಗಾಡಿ ಆನೆಯನ್ನ ಓಡಿಸಿದ್ದಾರೆ.

ಸ್ಥಳಕ್ಕೆ ಪಶುವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಮೂಡಿಗೆರೆ ಭಾಗದಲ್ಲಿ ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯ ಪಡೆ ರಚನೆಯ ಬಳಿಕ ಕಾಡಾನೆ ಹಾವಳಿ ನಿಯಂತ್ರಣದಲ್ಲಿದ್ದು, ಅಲ್ಲಲ್ಲಿ ಜಮೀನುಗಳಿಗೆ ದಾಳಿ ಇಡುತ್ತಿರುವುದು ಇತ್ತೀಚೆಗೆ ನಡೆಯುತ್ತಿದೆ. ಅರಣ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ದಶಕದಿಂದ ಆನೆ ಹಾವಳಿ ಮಿತಿಮೀರಿದ್ದು ಇದರಿಂದ ಸಾವು ಕೂಡ ಸಂಭವಿಸಿದೆ. ಹಾಗಾಗಿ, ಆನೆ ಹಾವಳಿಯಿಂದ ಕಂಗೆಟ್ಟಿರುವ ಮಲೆನಾಡಿಗರಿಗೆ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕಿದೆ. ಮಲೆನಾಡಿಗರು ಕಾಡಂಚಿನ ಗ್ರಾಮಗಳಲ್ಲಿ ಆನೆಗಳು ತೋಟ ಹಾಗೂ ಅರಣ್ಯದಿಂದ ಹೊರಬರದಂತೆ ದೊಡ್ಡದಾಗಿ ಟ್ರಂಚ್ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.