ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ರಸ್ತೆಯಲ್ಲಿ ಹೋಗುವಾಗ ದಾರಿಯಲ್ಲಿ ಸಿಕ್ಕ 12 ಸಾವಿರ ಹಣವನ್ನ ವಿದ್ಯಾರ್ಥಿಗಳು ಪೊಲೀಸರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಎಸ್.ವಿ.ಟಿ.ರಸ್ತೆಯ ಚಂದು ಆಟ್ರ್ಸ್ ಬಳಿ ಕಲ್ಕೆರೆ ಗ್ರಾಮದ ಜಯಂತ್ ಎಂಬುವರು 12900 ರೂಪಾಯಿ ಹಣವನ್ನ ಕಳೆದುಕೊಂಡಿದ್ದರು. ಕೊಪ್ಪಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಕಾಲೇಜು ಮುಗಿಸಿ ಮನೆಗೆ ಹೋಗುವಾಗ ರಸ್ತೆಯಲ್ಲಿ 12900 ರೂಪಾಯಿ ಹಣ ಸಿಕ್ಕಿತ್ತು. ಆ ಹಣವನ್ನ ವಿದ್ಯಾರ್ಥಿಗಳು ಶುಕ್ರವಾರ ಪೊಲೀಸರಿಗೆ ನೀಡಿ, ವಾರಸುದಾರರಿಗೆ ತಲುಪಿಸಲು ಮನವಿ ಮಾಡಿದ್ದರು. ವಿದ್ಯಾರ್ಥಿಗಳು ಹಣ ನೀಡುತ್ತಿದ್ದಂತೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಣ ಕಳೆದುಕೊಂಡವರು ಸೂಕ್ತ ದಾಖಲೆಯೊಂದಿಗೆ ಬಂದು ಪಡೆದುಕೊಳ್ಳುವಂತೆ ಹೋಗುವಂತೆ ಸೂಚನೆ ನೀಡಿದ್ದರು. ಅದರಂತೆ, ಇಂದು ಹಣದ ಮೂಲ ವಾರಸುದಾರ ಜಯಂತ್ ಅವರು ಪೊಲೀಸ್ ಠಾಣೆಗೆ ಬಂದು ಹಣವನ್ನ ಪಡೆದುಕೊಂಡಿದ್ದಾರೆ.
ಪೊಲೀಸರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಂದೀಪ್ ಮತ್ತು ಸ್ನೇಹಿತರನ್ನ ಕರೆಸಿ ಅವರ ಕೈನಿಂದಲೇ ಹಣವನ್ನ ಜಯಂತ್ ಅವರಿಗೆ ಕೊಡಿಸಿದ್ದಾರೆ. ರಸ್ತೆಯಲ್ಲಿ ಸಿಕ್ಕ ಹಣವನ್ನ ಪ್ರಮಾಣಿಕವಾಗಿ ಪೊಲೀಸ್ ಠಾಣೆಗೆ ತಲುಪಿಸಿದ ವಿದ್ಯಾರ್ಥಿಗಳಿಗೆ ಹಣದ ವಾರಸುದಾರ ಜಯಂತ್ ಅವರು ಬಹುಮಾನ ನೀಡಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರು ಕೂಡ ವಿದ್ಯಾರ್ಥಿಗಳ ಪ್ರಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.