ಸಮಗ್ರ ನ್ಯೂಸ್: ನಟ ಪ್ರಭಾಸ್ ಅಭಿನಯದಲ್ಲಿ ಸಿದ್ಧವಾಗಿರುವ ಸಲಾರ್ ಸಿನಿಮಾ, ಹತ್ತು ಹಲವು ವಿಚಾರಕ್ಕೆ ಚರ್ಚೆಯಲ್ಲಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನಿಮಾ ಎಂಬುದು ಒಂದೆಡೆಯಾದರೆ, ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೂ ಚಿತ್ರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸಲಾರ್ ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಇನ್ನೆರಡು ತಿಂಗಳು ಬಾಕಿ ಇದೆ. ಈ ನಡುವೆ ಈ ಹಿಂದಿನ ಹಲವು ಸಿನಿಮಾ ದಾಖಲೆಗಳನ್ನು ಸಲಾರ್ ಮುರಿಯಲಿದೆ ಎಂದೂ ಹೇಳಲಾಗುತ್ತಿದೆ. ಅದರಂತೆ ಈ ಚಿತ್ರದ ಡಿಜಿಟಲ್ ರೈಟ್ಸ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಸಲಾರ್ ಒಟಿಟಿ ಡೀಲ್ ಮುಗಿಸಿಕೊಂಡಿದೆ. ಸಲಾರ್‌ನ ಸೌತ್‌ನ ಎಲ್ಲ ಭಾಷೆ ಮತ್ತು ಹಿಂದಿ ಭಾಷೆಯ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಅದೂ ಬರೋಬ್ಬರು 200 ಕೋಟಿ ರೂಪಾಯಿಗೆ!
ಒಟಿಟಿಯಿಂದಲೇ ಶೇ. 80 ವಸೂಲಿ
ಬಹುಕೋಟಿ ವೆಚ್ಚದಲ್ಲಿ ಸಲಾರ್ ಸಿನಿಮಾ ನಿರ್ಮಾಣವಾಗಿದೆ. ಅದ್ದೂರಿ ದೃಶ್ಯಗಳಿಗಾಗಿ ಹಣವನ್ನು ನೀರಿನಂತೆ ಸುರಿದಿದೆ ಹೊಂಬಾಳೆ ಸಂಸ್ಥೆ. ಇದೀಗ ಲಾಭದ ಕಡೆ ಹೊರಳುತ್ತಿದ್ದಾರೆ ನಿರ್ಮಾಪಕರು. ಮೊದಲಾರ್ಥವಾಗಿ ಚಿತ್ರಕ್ಕೆ ನಿರ್ಮಾಪಕರು ಹಾಕಿದ ಬಂಡವಾಳದ ಶೇ.80ರಿಂದ 90ರಷ್ಟನ್ನು ಒಟಿಟಿ ರೈಟ್ಸ್ ಮೂಲಕ ವಸೂಲಿಯಾಗಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಸಿನಿಮಾ ಬಿಡುಗಡೆ ಬಳಿಕ ಬರುವ ಚಿತ್ರಮಂದಿರದ ಕಲೆಕ್ಷನ್ ಮತ್ತು ಸ್ಯಾಟಲೈಟ್ ಹಕ್ಕುಗಳಿಂದಲೂ ಬರುವ ಮೊತ್ತವೂ ಹೆಚ್ಚುವರಿ ಲಾಭವೇ ಆಗಿದೆ.
ಜುಲೈ 6 ರಂದು ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 24 ಗಂಟೆಯೊಳಗೆ 83 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ. ಸಲಾರ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸಿದ್ದು, ವರದರಾಜ್ ಮನ್ನಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಲಾರ್ ಚಿತ್ರದ ಟ್ರೈಲರ್ ಅನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಣ ಸಂಸ್ಥೆ ಘೋಷಿಸಿದೆ.