ಸಮಗ್ರ ನ್ಯೂಸ್: ಮೇ. 13ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸೋತು ಸುಣ್ಣ ಆಗಿದ್ರೆ, ಕಾಂಗ್ರೆಸ್ ಗೆದ್ದು ಬೀಗಿತ್ತು. ಹೀಗಾಗಿ ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ, ಆಡಳಿತ ಪಕ್ಷಕ್ಕೆ ಬಂದಿದ್ದರು. ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರದಲ್ಲಿ ನಾಲ್ಕೈದು ದಿನಗಳು ತಡವಾಯ್ತು. ಮೇ 20ರಂದು ಸಿಎಂ, ಡಿಸಿಎಂ, ಸಚಿವರು ಪ್ರಮಾಣ ಸ್ವೀಕಾರ ಮಾಡಿದ್ದರು.
ಆದರೆ ಮೇ 13ರಿಂದಲೇ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಇರಲಿಲ್ಲ. ರಾಜ್ಯ ಸರ್ಕಾರ ಅಧಿಕೃತ ವಿರೋಧ ಪಕ್ಷದ ನಾಯಕರು ಇಲ್ಲದೆ 60 ದಿನಗಳನ್ನು ಕಳೆದಂತಾಗಿದೆ. ಅನಿವಾರ್ಯವಾಗಿ ಕೆಲವು ಬಿಜೆಪಿ ಶಾಸಕರು ಸದನದಲ್ಲಿ ಭಾಗಿಯಾಗುತ್ತಿದ್ರೆ, ಮತ್ತಷ್ಟು ಶಾಸಕರು ಸದನದ ಕಡೆಗೆ ತಿರುಗಿ ಕೂಡಾ ನೋಡ್ತಿಲ್ಲ. ಬಿಜೆಪಿ ಹೈಕಮಾಂಡ್ ಮಾತ್ರ ಏನೂ ಗೊತ್ತಿಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದೆ. ಇದರ ಪರಿಣಾಮ ರಾಜ್ಯದ ಮೇಲಾಗಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಣೋತ್ಸಾಹದಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಅಸಲಿಗೆ ಬಿಜೆಪಿ ಅಧಿಕೃತ ವಿಪಕ್ಷ ಆದರೂ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅಧಿಕೃತ ವಿರೋಧ ಪಕ್ಷದ ನಾಯಕ ರಾಜ್ಯಕ್ಕೆ ಅವಶ್ಯಕತೆ ಇರುತ್ತದೆ.
ಸರ್ಕಾರ ತಪ್ಪು ಮಾಡಿದಾಗ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ವಿಪಕ್ಷ ನಾಯಕ ಮಾಡಬೇಕಿದೆ. ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕನಾಗಿ ಸರ್ಕಾರವನ್ನು ಹೆಜ್ಜೆ ಹೆಜ್ಜೆಯನ್ನೂ ಗಮನಿಸುತ್ತಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆಯಾದರೆ ಆ ಸ್ಥಾನಕ್ಕೆ ಕೆಲವೊಂದು ವಿನಾಯ್ತಿಗಳು ಸಿಗುತ್ತವೆ.
ಸರ್ಕಾರಕ್ಕೆ ಎದುರಾಳಿಯಾಗಿ ನಿಂತು ಮಾತನಾಡುವ ಅವಕಾಶ ಹೆಚ್ಚಾಗಿತ್ತದೆ. ಸಿಎಂ ಸ್ಥಾನಕ್ಕೆ ಸರಿಸಮಾನವಾದ ಪಾತ್ರವನ್ನು ವಿಪಕ್ಷ ನಾಯಕ ನಿರ್ವಹಣೆ ಮಾಡುವುದರಿಂದ ಆದಷ್ಟು ಬೇಗ ವಿಪಕ್ಷನ ನಾಯಕನ ಆಯ್ಕೆ ಆಗಬೇಕಿದೆ. ಇದೀಗ ಬಿಜೆಪಿಯಲ್ಲಿ ಎಲ್ಲರೂ ಎದ್ದು ನಿಲ್ಲುತ್ತಿದ್ದು, ವಿಪಕ್ಷ ನಾಯಕನಾಗಲು ಸದನದೊಳಗೇ ಪೈಪೋಟಿ ನಡೆಯುತ್ತಿದ್ಯಾ..? ಅನ್ನೋ ಅನುಮಾನ ಮೂಡುವಂತೆ ಆಗಿದೆ.