ಸಮಗ್ರ ನ್ಯೂಸ್: ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಗೆ ಟೊಮೆಟೊ ಮಾರಾಟವಾಗುತ್ತಿದ್ದು, ಈಗ ಪ್ರತಿ ಕೆಜಿ ಟೊಮೆಟೊ ದರ ೧೦೦ರ ಗಡಿ ದಾಟಿದೆ. ಟೊಮೆಟೊಗೆ ಚಿನ್ನದ ಬೆಲೆ ಬಂದಿರೋ ದೆಸೆಯಿಂದ ಕಳ್ಳಕಾಕರ ಕಣ್ಣು ಟೊಮೆಟೊ ತೋಟಗಳತ್ತ ಹರಿಯುತ್ತದೆ. ಜಗದೀಶ್ ಎಂಬುವರ ಟೊಮೆಟೊ ತೋಟದಲ್ಲಿ ಎರಡು ಬಾರಿ ಟೊಮೆಟೊ ಕಳವು ಪ್ರಕರಣ ನಡೆದಿದ್ದು, ತೋಟದ ಮಾಲೀಕರಾದ ಗಂಡ ಹೆಂಡತಿ ಇಬ್ಬರು ಕೈಯಲ್ಲಿ ದೊಣ್ಣೆ ಹಿಡಿದು ತೋಟವನ್ನು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಷ್ಮೀದೇವಿಪುರ ಗ್ರಾಮದ ಜಗದೀಶ್ ಮತ್ತು ಶಶಿಕಲಾ ದಂಪತಿಗಳ ತೋಟದಲ್ಲಿ ಎರಡು ಬಾರಿ ಟೊಮೆಟೊ ಕಳವು ಪ್ರಕರಣ ನಡೆದಿದ್ದು, ಒಂದೂವರೆ ಲಕ್ಷ ಮೌಲ್ಯದ ಟೊಮೆಟೊ ಕಳ್ಳರ ಪಾಲಾಗಿದೆ. ಜಗದೀಶ್ ಅವರು ೩ ಲಕ್ಷ ವೆಚ್ಚದಲ್ಲಿ ೧ ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ೧೦೦ ರ ಗಡಿ ದಾಟಿದ್ದು, ಉತ್ತಮವಾದ ಫಸಲು ಬಂದ ಕಾರಣಕ್ಕೆ ದಂಪತಿಗಳು ಸಂತಸಗೊಂಡಿದ್ದರು. ಆದರೆ, ಶನಿವಾರ ಹಾಗೂ ಭಾನುವಾರ ತೋಟಕ್ಕೆ ನುಗ್ಗಿದ ಕಳ್ಳರು ಒಂದೂವರೆ ಲಕ್ಷ ಮೌಲ್ಯದ ಸುಮಾರು ೮೦ ಬಾಕ್ಸ್ ಗಳಷ್ಟು ಟೊಮೆಟೊ ಕದ್ದು ಪರಾರಿಯಾಗಿದ್ದಾರೆ. ಇರುವ ಬೆಳೆಯನ್ನ ಉಳಿಸಿಕೊಳ್ಳಲು ದಂಪತಿಗಳಿಬ್ಬರು ಕೈಯಲ್ಲಿ ದೊಣ್ಣೆ ಹಿಡಿದು ತೋಟ ಕಾಯುತ್ತಿದ್ದಾರೆ.
ಜಗದೀಶ್ ಅವರು ಇತ್ತೀಚೆಗಷ್ಟೇ ಹೊಸ ಕೊಳವೆಬಾವಿ ಕೊರೆಸಿದ್ದರು. ನೀರು ಸಿಗದ ಕಾರಣ ಮತ್ತೊಂದು ಕೊಳವೆಬಾವಿ ಕೊರೆಸಿ ಬೆಳೆ ಬೆಳೆಯಲು ಆರಂಭಿಸಿದ್ದರು. ಇದಕ್ಕೆಲ್ಲ ಒಟ್ಟು ೧೨ ಲಕ್ಷ ಸಾಲ ಮಾಡಿದ್ದರು. ಟೊಮೆಟೊ ಬೆಳೆಗೆ ಉತ್ತಮವಾದ ಬೆಲೆ ಬಂದ ಹಿನ್ನೆಲೆಯಲ್ಲಿ ಸಾಲ ತೀರಿಸಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಆ ರೈತಾಪಿ ಕುಟುಂಬದ ಆಸೆಗೆ ಕಿಡಿಗೇಡಿಗಳು ತಣ್ಣೀರೆರಚಿದ್ದಾರೆ.