ಸಮಗ್ರ ನ್ಯೂಸ್: ತುಳುನಾಡಿನ ದೈವ ಕೊರಗಜ್ಜ ಮತ್ತೊಮ್ಮೆ ಕಾರಣಿಕ ಮೆರೆದಿದ್ದಾನೆ. ಉಡುಪಿ ಜಿಲ್ಲೆಯ ಕುರುಡುಂಜೆಯಲ್ಲಿ ಕೊರಗಜ್ಜ ಭಕ್ತನೊಬ್ಬ ಕಷ್ಟ ಪಟ್ಟು ದುಡಿದ ಇಪ್ಪತ್ತೈದು ಸಾವಿರ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದ. ನಂತರ ಆತ ಕೊರಗಜ್ಜನನ್ನು ನೆನೆದು ಏಳು ಹೆಜ್ಜೆ ಹಾಕುವ ಮುನ್ನ ಪವಾಡದಂತೆ ಕಳೆದು ಹೋದ ಹಣ ಸಿಕ್ಕಿದೆ.
ಬ್ರಹ್ಮಾವರ ಸಮೀಪದ ಕುರುಡುಂಜೆಯಲ್ಲಿ ಈ ಘಟನೆ ನಡೆದಿದೆ. ಕುರುಡುಂಜೆಯಲ್ಲಿ ಗದ್ದೆಯೊಂದರಲ್ಲಿ ಶಿವಮೊಗ್ಗ ಮೂಲದ ಗಣೇಶ್ ತನ್ನ ಟ್ರಾಕ್ಟರ್ ಉಳುಮೆ ಮಾಡುತ್ತಿದ್ದರು. ಹತ್ತಿರದ ಗದ್ದೆಗಳಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಂಪಾದಿಸಿದ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟಿದ್ದ.
ಟ್ರ್ಯಾಕ್ಟರ್‌ನಲ್ಲೇ ಹಣದ ಕಟ್ಟು ಇಟ್ಟುಕೊಂಡು ಗಣೇಶ್ ಉಳುಮೆ ಮಾಡುತ್ತಿದ್ದರು. ಉಳುಮೆ ಎಲ್ಲಾ ಮುಗಿದ ಬಳಿಕ ಗಣೇಶ್ ಹಣದ ಕಟ್ಟಿನತ್ತ ಕೈಯಾಡಿಸಿದ್ದಾರೆ. ಆದರೆ ಹಣದ ಕಂತೆಯ ಚೀಲ ಗದ್ದೆಯ ಕೆಸರಿನಲ್ಲಿ ಕಳೆದುಹೋಗಿತ್ತು. ಗಣೇಶ್ ಅವರು ಗದ್ದೆಯಲ್ಲಿ ಎಷ್ಟೇ ಹುಡುಕಿದರೂ ಹಣ ಸಿಗಲಿಲ್ಲ. ಆಗ ಸ್ಥಳೀಯ ಮಹೇಶ್ ಶೆಟ್ಟಿ ಅವರ ಸಲಹೆ ಮೇರೆಗೆ ಗಣೇಶ್ ಕೊರಗಜ್ಜನಿಗೆ ಹರಕೆ ಹೊತ್ತಿದ್ದಾರೆ.

ಕಳ್ಳು, ಬೀಡ, ಚಕ್ಕುಲಿಯೊಂದಿಗೆ ದೊರಕಿದ ಹಣದಲ್ಲಿ ಒಂದು ಸಾವಿರ ಕಾಣಿಕೆ ಹಾಕುವುದಾಗಿ ಹರಕೆ ಹೊತ್ತಿದ್ದಾರೆ. ನಂತರ ಆಶ್ಚರ್ಯವೆಂಬಂತೆ ಕೊರಗಜ್ಜನಿಗೆ ಹರಕೆ ನೆನೆದು ಏಳು ಹೆಜ್ಜೆ ಇಡುವಷ್ಟರಲ್ಲಿಯೇ ಹಣದ ಚೀಲ ಸಿಕ್ಕಿದೆ. ಹಲವು ಬಾರಿ ಹುಡುಕಿದ ಸ್ಥಳದಲ್ಲೇ ನೋಟು ಸಿಕ್ಕಿರೋದು ಕೊರಗಜ್ಜನ ಪವಾಡಕ್ಕೆ ಸಾಕ್ಷಿಯಾಗಿದೆ.
ಗಣೇಶ್ ಅವರ ಹಣ ಕಳೆದುಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಕೆಸರ ಗದ್ದೆಯಲ್ಲಿ ಹಣ ಕಳೆದುಹೋದ ಬಳಿಕ ಮೂರು ಗಂಟೆಗಳ ಕಾಲ ಹತ್ತಾರು ಜನ ಗದ್ದೆ ಪೂರ್ತಿ ಹುಡುಕಾಟ ಮಾಡಿದ್ದೇವೆ. ಆದರೆ ಯಾರಿಗೂ ಹಣ ಸಿಗಲಿಲ್ಲ. ಕೊನೆಗೆ ನನ್ನ ಸಲಹೆ ಮೇರೆಗೆ ಕೊರಗಜ್ಜನಿಗೆ ಹರಕೆ ಕಟ್ಟಿಕೊಂಡಿದ್ದರು. ಹರಕೆ ಹೇಳಿ ಏಳು ಹೆಜ್ಜೆ ಹಾಕುವಷ್ಟರಲ್ಲಿ ಹಣದ ಚೀಲ ಸಿಕ್ಕಿದೆ. ಕೊರಗಜ್ಜನ ಶಕ್ತಿ ಗೊತ್ತಿದ್ದರೂ ಮತ್ತೆ ಮತ್ತೆ ಕಾರಣಿಕ ಮೆರೆದಿರೋದು ನಂಬಿಕೆಯ ಶಕ್ತಿಯನ್ನು ಜಾಸ್ತಿ ಮಾಡಿದೆ ಎಂದು ಮಹೇಶ್ ಶೆಟ್ಟಿ ಹೇಳಿದ್ದಾರೆ.