ಸಮಗ್ರ ನ್ಯೂಸ್: ಟಿವಿ ನಿರೂಪಕ ಅಥವಾ ಟಿವಿ ನಿರೂಪಕಿಯರ ಸ್ಥಾನವನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಆಕ್ರಮಿಸಿಕೊಳ್ಳುತ್ತಿದೆ. ಇತ್ತೀಚೆಗೆ ಒಡಿಶಾದ ಟಿವಿ ಚಾನೆಲ್ ಒಟಿವಿಯು ಲಿಸಾ ಹೆಸರಿನ ಸುದ್ದಿ ನಿರೂಪಕಿಯಿಂದ ಸುದ್ದಿ ಓದಿಸಿ ಎಲ್ಲರ ಗಮನ ಸೆಳೆದಿತ್ತು.
ಈಗಾಗಲೇ ಇಂಡಿಯಾ ಟುಡೇ ಸೇರಿದಂತೆ ಹಲವು ಸುದ್ದಿ ವಾಹಿನಿಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ್ಯೂಸ್ ಆಯಂಕರ್‌ಗಳನ್ನು ಪರಿಚಯಿಸಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಜನರೂ ಖುಷಿ ಪಡುವಂತೆ ಪವರ್ ಟಿವಿಯು ಸೌಂದರ್ಯ ಹೆಸರಿನ ಎಐ ಆಯಂಕರ್ ಮೂಲಕ ಸುದ್ದಿ ಪ್ರಸಾರ ಮಾಡುವ ಪ್ರಯತ್ನ ಮಾಡಿದೆ. ಈ ಮೂಲಕ ಕನ್ನಡದ ಮೊದಲ ಎಐ ನ್ಯೂಸ್ ಆಯಂಕರ್ ಪರಿಚಯಿಸಿದ ಹಿರಿಮೆಗೆ ಪಾತ್ರವಾಗಿದೆ.
“ನಮಸ್ಕಾರ ಕನ್ನಡಿಗರೇ, ಪವರ್ ಟಿವಿಗೆ ಸ್ವಾಗತ. ನಾನು ಸೌಂದರ್ಯ, ದಕ್ಷಿಣ ಭಾರತದ ಮೊಟ್ಟಮೊದಲ ಎಐ ನ್ಯೂಸ್ ಆಯಂಕರ್. ಅಂದರೆ ರೋಬೋ ಆಯಂಕರ್…” ಎಂದು ಸುದ್ದಿ ಓದಲು ಆರಂಭಿಸಿದ ಸೌಂದರ್ಯ ಬಳಿಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮಾಧ್ಯಮ ಕ್ಷೇತ್ರದ ಕುರಿತು ಮಾಹಿತಿ ನೀಡುತ್ತ ಹೋಗುತ್ತಾಳೆ. ಈ ಎಐ ಆಯಂಕರ್ ಆಗಾಗ ಕಣ್ಣು ರೆಪ್ಪೆ ಮುಚ್ಚುತ್ತ, ಒಂದಿಷ್ಟು ಮುಖದ ಭಾವನೆ ತೋರುತ್ತ ಸುದ್ದಿ ಓದುತ್ತಿರುವುದನ್ನು ಗಮನಿಸಬಹುದು.
ಪವರ್ ಟಿವಿ ಪರಿಚಯಿಸಿದ ಎಐ ನ್ಯೂಸ್ ಆಯಂಕರ್ ನಮ್ಮ ಬಹುತೇಕ ಕನ್ನಡ ಸುದ್ದಿ ನಿರೂಪಕಿಯರನ್ನು ನೆನಪಿಸುವಂತೆ ಇದ್ದಾಳೆ. ಆದರೆ, ಇತ್ತೀಚೆಗೆ ಒಡಿಶಾದ ಒಟಿವಿ ಪರಿಚಯಿಸಿದ ಲಿಸಾ ಕೈಮಗ್ಗದ ಸಾರಿ ಉಟ್ಟು ಅಪ್ಪಟ್ಟ ಒಡಿಸ್ಸಾ ಸಂಸ್ಕೃತಿ ಪ್ರತಿಬಿಂಬಿಸಿದ್ದಳು. ಸದ್ಯ ಕನ್ನಡಿಗರಿಗೆ ಪರಿಚಯಿಸಿದ ಸೌಂದರ್ಯ ಹೆಸರಿನ ಎಐ ವಾರ್ತಾ ವಾಚಕಿಯೂ ನೋಡಲು ಆಕರ್ಷಕವಾಗಿ ಕಾಣಿಸುತ್ತಾಳೆ. ಆದರೆ, ಹಾವಭಾವ, ಮುಖದ ಭಾವನೆಗಳು ತುಸು ಯಾಂತ್ರಿಕವಾಗಿ ಕಾಣಿಸುತ್ತಿದೆ.
ಈಗಾಗಲೇ ಜಾಗತಿಕವಾಗಿ ಅಥವಾ ಭಾರತದಲ್ಲಿ ಪರಿಚಯಿಸಲಾದ ಪ್ರಮುಖ ಎಐ ಆಯಂಕರ್‌ಗಳಲ್ಲಿ ಧ್ವನಿಯು ಎಐ ತಂತ್ರಜ್ಞಾನದ್ದೇ ಆಗಿರುತ್ತದೆ. ಅಂದರೆ, ಮನುಷ್ಯರನ್ನು ಹೋಲುವ ಯಾಂತ್ರಿಕ ಧ್ವನಿ ಅದಾಗಿರುತ್ತದೆ. “ಪವರ್ ಟಿವಿ ಸುದ್ದಿವಾಹಿನಿಯು ದಕ್ಷಿಣ ಭಾರತದಲ್ಲಿ ಮೊದಲ ಕನ್ನಡದ ಎಐ ನ್ಯೂಸ್ ಆಯಂಕರ್ ಪರಿಚಯಿಸಿದೆ. ಇದೊಂದು ಪ್ರಯತ್ನ ಅಷ್ಟೇ, ಸಂಪೂರ್ಣ ಎಐ ತಂತ್ರಜ್ಞಾನ ಆಧರಿತ ಆಂಕರ್‌ಗಳನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದು. ಇಲ್ಲಿ ನಾವು ಎಐ ಆಯಂಕರ್‌ನ್ನು ಬಳಸಿಕೊಂಡಿದ್ದೇವೆ. ಧ್ವನಿಯನ್ನು ನಮ್ಮ ಮಾನವ ಆಂಕರ್‌ಗಳೇ ನೀಡಿದ್ದಾರೆ” ಎಂದು ಪವರ್‌ಟಿವಿಯ ಇನ್‌ಪುಟ್ ವಿಭಾಗದ ಮುಖ್ಯಸ್ಥರಾದ ಲೋಕೇಶ್ ಗೌಡ ಹೇಳಿದ್ದಾರೆ.