ಸಮಗ್ರ ನ್ಯೂಸ್: ಬಿಜೆಪಿಯ ಭದ್ರಕೋಟೆ ಕರಾವಳಿಯಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತೆ ಬಿಜೆಪಿಗೆ ಬಿಸಿ ತುಪ್ಪವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಅರುಣ್ ಕುಮಾರ್ ಪುತ್ತಿಲ ಬಂಡಾಯ ಶಮನಕ್ಕೆ ಖುದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕಣಕ್ಕೆ ಇಳಿದಿದ್ದಾರೆ ಎಂದು ವರದಿಯಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರನ್ನು ದೆಹಲಿಗೆ ಕರೆಸಿಕೊಂಡು ಬಿಎಲ್ ಸಂತೋಷ್ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ರಾಜ್ಯದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ. ಈ ವೇಳೆ ಪುತ್ತಿಲ ಅವರಿಗೆ ಸಮಸ್ಯೆ ಹೇಳಿಕೊಳ್ಳಲು ದೀರ್ಘ ಸಮಯ ನೀಡಲಾಗಿತ್ತು ಎನ್ನಲಾಗಿದೆ.
ಆರ್ ಎಸ್ಎಸ್ ಸೂಚನೆ ಮೇರೆಗೆ ಈ ಭೇಟಿ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅದರೆ ಈ ಭೇಟಿ ಕರಾವಳಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಟಿಕೆಟ್ ಬೇಡಿಕೆ?
ಇನ್ನು ಅರುಣ್ ಕುಮಾರ್ ಪುತ್ತಿಲ ಜೊತೆ ಬಂದಿದ್ದ ಅವರ ನಾಲ್ಕೈದು ಜನ ಬೆಂಬಲಿಗರು ತಮ್ಮ ನಾಯಕನನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರನ್ನಾಗಿ ನೋಡುವ ಇಚ್ಛೆಯನ್ನು ಹೊರ ಹಾಕಿದ್ದಾರಂತೆ. ಈ ಮೂಲಕ ಲೋಕಸಭಾ ಟಿಕೆಟ್ ಬೇಡಿಕೆಯನ್ನು ಪರೋಕ್ಷವಾಗಿ ಇರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು. ಅದ್ರೆ ಪುತ್ತೂರು ಕ್ಷೇತ್ರದಲ್ಲಿ ಹಿಂದುತ್ವ ವರ್ಸಸ್ ಹಿಂದುತ್ವ ನಡುವೆ ನಡೆದ ಫೈಟ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡರು.
ಚುನಾವಣೆಯಲ್ಲಿ ಸೋತರೂ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗ ಮಾತ್ರ ಹೆಚ್ಚಾಗ್ತಿದೆ. ಇಷ್ಟು ಮಾತ್ರವಲ್ಲದೇ ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಇದು ಹಾಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಕುತ್ತು ತಂದಿದೆ.
ಒಂದು ಹೆಜ್ಜೆ ಹಿಂದಿಟ್ಟ ಬಿಎಲ್ ಸಂತೋಷ್?
ನಳಿನ್ ಕುಮಾರ್ ಕಟೀಲ್ ಅವರಿಗಾಗಿಯೇ ಬಿಎಲ್ ಸಂತೋಷ್ ತಾವೇ ಒಂದು ಹೆಜ್ಜೆ ಹಿಂದೆ ಇರಿಸಿ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದ್ರೆ ಭೇಟಿ ಬಳಿಕವೂ ಪುತ್ತಿಲ ಶಸ್ತ್ರ ತ್ಯಾಗಕ್ಕೆ ಮುಂದಾಗಿಲ್ಲ ಎಂದು ಹೇಳಲಾಗ್ತಿದೆ.
ಬಿಎಲ್ ಸಂತೋಷ್ ಭೇಟಿ ವೇಳೆ ಪುತ್ತಿಲ ಯಾವುದೇ ಸಮ್ಮತಿ ಸೂಚಿಸದೇ ಹಿಂದಿರುಗಿದ್ದಾರೆ ಎಂಬ ಮಾತುಗಳ ಕೇಳಿ ಬಂದಿದೆ. ಕ್ಷೇತ್ರಕ್ಕೆ ತೆರಳಿ ಬೆಂಬಲಿಗರ ಜೊತೆ ಚರ್ಚೆ ನಡೆಸುವೆ ಎಂದಷ್ಟೇ ಹೇಳಿ ಬಂದಿದ್ದಾರಂತೆ. ಇತ್ತ ಬಿಎಲ್ ಸಂತೋಷ್ ಕೇವಲ ಸಮಸ್ಯೆಗಳನ್ನು ಆಲಿಸಿ, ಯಾವುದೇ ಭರವಸೆಯನ್ನು ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಮಂಗಳೂರು ಬಿಜೆಪಿ ಕಾರ್ಯಕರ್ತರ ಅಸಮಾಧಾನ!
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಸೋಲಿಗೆ ಕಾರಣವಾಗಿರುವ ಪುತ್ತಿಲ ಅವರನ್ನು ದೆಹಲಿಗೆ ಕರೆಸಿ ಮಾತನಾಡಿರೋದಕ್ಕೆ ಮಂಗಳೂರು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ.
ಪುತ್ತಿಲ ಮುಂದಿನ ನಡೆ ಏನು?
ಬಿಎಲ್ ಸಂತೋಷ್ ಭೇಟಿ ಬಳಿಕ ಪುತಿಲ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಥವಾ ಆರ್ಎಸ್ಎಸ್ನಿಂದ ಸ್ಪಷ್ಟ ಸಂದೇಶ ಸಿಗೋವರೆಗೂ ಯಾವುದೇ ನಿರ್ಧಾರ ಪ್ರಕಟಿಸದಿರಬಹುದು.