ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಹೊಲಸು ರಾಜಕಾರಣ ಮಾಡಿದ್ದರಿಂದಾಗಿ ಈಗ ಅನ್ನಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 170 ರೂ.ನಂತೆ ನೇರ ನಗದು ವರ್ಗಾವಣೆ ಆರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಲಾರ, ಮೈಸೂರು ಜಿಲ್ಲೆಗಳಿಗೆ ನಗದು ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಾಯಿತು. ಧಾರವಾಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳಿಗೆ ನೇರ ವರ್ಗಾವಣೆ ಆಗಲಿದೆ. ಹಂತಹಂತವಾಗಿ ಎಲ್ಲ ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಲಿದೆ.
ಅಕ್ಕಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರದ ಎಫ್‌ಸಿಐ ಹೇಳಿತ್ತು. ಆದರೆ ನಂತರ ಕೇಂದ್ರ ಸರ್ಕಾರ ಇದನ್ನು ತಡೆಯಿತು. ಇದು ಕೇಂದ್ರ ಸರ್ಕಾರದ Dirty Politics ಅಲ್ಲವೇ? ಇದನ್ನು ರಾಜಕೀಯ ಧ್ವೇಷ ಎಂದು ಕರೆಯಬೇಕ? ಬಡವರ ವಿರೋಧಿ ಕ್ರಮ ಎಂದು ಕರೆಯಬೇಕ? ಏನೆಂದು ಕರೆಯಬೇಕು? ನಮಗೆ ಅಕ್ಕಿ ಕೊಡುವುದಿಲ್ಲ ಎಂದು ಹೇಳಿ ಸಾರ್ವಜನಿಕ ಹರಾಜಿಗೆ ಹೋದರು. ಆದರೆ ಅಲ್ಲಿ ಟೆಂಡರ್‌ನಲ್ಲಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.
ಅಕ್ಕಿ ಇಟ್ಟುಕೊಂಡು, ನಮಗೆ 34 ರೂ.ಗೆ ಕೊಡಲು ಒಪ್ಪಿದ್ದರು. ನಾವೇನು ಫ್ರೀಯಾಗಿ ಕೇಳಿಲ್ಲ. ಆದರೂ ಕೊಡಲಿಲ್ಲ. ಬಡವರಿಗೆ ದ್ರೋಹ ಮಾಡುವ ರಾಜಕಾರಣ ಇದು. ಅಕ್ಕಿ ಕೊಡುವುದಿಲ್ಲ ಎಂದು ಎಫ್‌ಸಿಐ ಹೇಳಿದ ಮೇಲೆ ಛತ್ತೀಸ್‌ಗಢ, ಪಂಜಾಬ್, ತೆಲಂಗಾಣ, ಆಂಧ್ರ ಪ್ರದೇಶದ ಸಿಎಂಗಳ ಜತೆಗೆ ಮಾತನಾಡಿದೆವು. ಆದರೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದು ಯಾರೂ ಹೇಳಲಿಲ್ಲ. ನಂತರದಲ್ಲಿ ತಲಾ 170 ರೂ. ಕೊಡಲು ಅನಿವಾರ್ಯವಾಗಿ ತೀರ್ಮಾನ ಮಾಡಿದ್ದೇವೆ. ಈಗ ಅಕ್ಕಿ ಖರೀದಿಗೆ ಟೆಂಡರ್ ಕರೆದಿದ್ದೇವೆ ಎಂದರು.
ಫಲಾನುಭವಿಗಳು ಈ ಹಣ ಬಳಸಿಕೊಂಡು ಅಕ್ಕಿ ಕೊಂಡುಕೊಳ್ಳಿ. ಹೊಟ್ಟೆತುಂಬ ಊಟ ಮಾಡಿ, ನೆಮ್ಮದಿಯಾಗಿರಿ. ನಮ್ಮನ್ನು ಟೀಕೆ ಮಾಡುವವರಿಗೆ ಸೊಪ್ಪು ಹಾಕುವುದಿಲ್ಲ. ನಮ್ಮ ಕರ್ತವ್ಯ ಇದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.