ಸಮಗ್ರ ನ್ಯೂಸ್: ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಇಂದು ಎರಡನೇ ವಾರಕ್ಕೆ ಕಾಲಿಟ್ಟಿದೆ. ಹೀಗಿದ್ದರೂ, ವಿರೋಧ ಪಕ್ಷಗಳಿಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳಾಗುತ್ತಿದ್ದರೂ, ವಿಧಾನ ಮಂಡಲ ಅಧಿವೇಶನ ಆರಂಭವಾಗಿ ಒಂದು ವಾರ ಕಳೆದರೂ ಪ್ರತಿಪಕ್ಷಕ್ಕೆ ಅಧಿಕೃತ ನಾಯಕರು ಇಲ್ಲದಂತಾಗಿದೆ.
ವಿಪಕ್ಷ ನಾಯಕನ ಆಯ್ಕೆ ಸಂಬಂಧ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿ ಹಿರಿಯ ಮುಖಂಡರು ಹಾಗೂ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದು, ವರಿಷ್ಠರಿಗೆ ವರದಿಯನ್ನು ನೀಡಲಾಗಿದೆ.
ಆದರೆ, ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗಿಲ್ಲ. ರಾಜ್ಯ ಬಿಜೆಪಿ ನಾಯಕರಲ್ಲಿ ವಿಪಕ್ಷ ನಾಯಕರಾಗಲು ಹಲವರು ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವರಿಷ್ಠರು ಅಳೆದು ತೂಗಿ ಈ ವೇಳೆಗಾಗಲೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಅಧಿವೇಶನ ಎರಡನೇ ವಾರಕ್ಕೆ ಕಾಲಿಟ್ಟರೂ ಇನ್ನೂ ವಿಪಕ್ಷ ನಾಯಕರು ಇಲ್ಲದಂತಾಗಿದೆ. ಇದು ವಿಪಕ್ಷ ಸದಸ್ಯರಿಗೆ ಮುಜುಗರ ತಂದಿಟ್ಟಿದೆ.
ಪ್ರತಿಪಕ್ಷದ ನಾಯಕನನ್ನಾಗಿ ಬಿಜೆಪಿಯವರೂ ಜೆಡಿಎಸ್‌ನ ಕುಮಾರಸ್ವಾಮಿ ಅವರನ್ನೇ ಒಪ್ಪಿಕೊಳ್ಳುವುದು ಸೂಕ್ತ ಎಂಬ ಮಾತು ವಿಧಾನಸಭೆಯ ಕಾರಿಡಾರ್‌ನಲ್ಲಿ ತೇಲಾಡುತ್ತಿದೆ. ಸಾರ್ವಜನಿಕರು ಅಥವಾ ಜೆಡಿಎಸ್ ಮುಖಂಡರು ಇಲ್ಲವೇ ಕಾರ್ಯಕರ್ತರು ಮಾತನಾಡುವುದನ್ನು ಪಕ್ಕಕ್ಕೆ ಇಟ್ಟು ಬಿಡಿ. ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರೂ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಶಾಸಕರ ಪೈಕಿ ಯಾರೇ ಪ್ರತಿಪಕ್ಷದ ನಾಯಕರಾದರೂ ಕುಮಾರಸ್ವಾಮಿ ರೀತಿ ಕಾಂಗ್ರೆಸ್ ವಿರುದ್ಧ ‘ಅಟ್ಯಾಕ್’ ಮಾಡುವುದಿಲ್ಲ. ಅದರ ಬದಲು, ಜೆಡಿಎಸ್ ಮತ್ತು ಬಿಜೆಪಿ ಕೂಟ ಅಂತ ಮಾಡಿಕೊಂಡು ಕುಮಾರಸ್ವಾಮಿ ಅವರನ್ನೇ ಅದರ ನಾಯಕನನ್ನಾಗಿ ಮಾಡಿದರೆ ಕಾಂಗ್ರೆಸ್ ಸರ್ಕಾರಕ್ಕೆ ಚೆನ್ನಾಗಿ ನೀರಿಳಿಸಬಹುದು ಎಂಬ ಲಘು ಧಾಟಿಯ ಅಭಿಪ್ರಾಯ ಬಿಜೆಪಿ ಪಾಳೆಯದಿಂದ ಪ್ರತಿಧ್ವನಿಸುತ್ತಿರುವುದು ಸುಳ್ಳಲ್ಲ.
ಬಜೆಟ್ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಟು ಟೀಕೆ, ಟಿಪ್ಪಣಿ ಮಾಡಿರುವುದು ಕಮಲಪಡೆಯನ್ನು ಕೆಂಡಾಮಂಡಲ ವಾಗಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಕಸರತ್ತು ನಡೆಸದೆ, ಸಾಲ ಮತ್ತು ಅನುದಾನ ಕಡಿತಕ್ಕೆ ಮೊರೆ ಹೋಗಿರುವುದಕ್ಕೆ ಬಿಜೆಪಿ ಆಕ್ಷೇಪವೆತ್ತಿದೆ.
ಕೃಷಿ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಅನುದಾನ ಕಡಿತವಾಗಿದೆ. ನೀರಾವರಿ ಯೋಜನೆಗಳು ನಗಣ್ಯ, ಸರ್ಕಾರಿ ನೌಕರರ ಬೇಡಿಕೆಗಳ ಕಡೆಗಣನೆ ಅಸ್ತ್ರಗಳನ್ನು ಅಧಿವೇಶನದಲ್ಲಿ ಬಳಸಲಿದೆ. ಐದು ಗ್ಯಾರಂಟಿಗಳು, ಸಾಲ, ತೆರಿಗೆ ಹೊರೆ, ಕೇಂದ್ರ ಸರ್ಕಾರದ ಟೀಕೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಬಿಟ್ಟರೆ ಬಜೆಟ್ನಲ್ಲಿ ಬೇರೇನಿಲ್ಲ ಎಂದು ಬಿಂಬಿಸಲು ಮುಂದಾಗಿದೆ.