Ad Widget .

Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ

ಸಮಗ್ರ ನ್ಯೂಸ್: ಹತ್ಯೆಯಾಗಿರುವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆಯು ಜೈನ ಸಂಪ್ರದಾಯದಂತೆ ನೆರೆವೇರಿದೆ. ಹುಬ್ಬಳ್ಳಿಯ ವರೂರು ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಜೈನಮುನಿಯ ಅವರ ಪೂರ್ವಾಶ್ರಮದ ಅಣ್ಣನ ಮಗ, ಆಶ್ರಮದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಭೀಮಗೊಂಡ ಉಗಾರೆ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

Ad Widget . Ad Widget .

ನಮೋಕಾರ ಮಂತ್ರ ಪಠಣ:
ಮರಣೋತ್ತರ ಪರೀಕ್ಷೆ ಬಳಿಕ ಬೆಳಗಾವಿ ಜಿಲ್ಲಾಸ್ಪತ್ರೆಯಿಂದ ಕಾಮಕುಮಾರ ಮುನಿಶ್ರೀ ಅವರ ಪಾರ್ಥಿವ ಶರೀರವನ್ನು ನಂದಿ ಪರ್ವ ಆಶ್ರಮಕ್ಕೆ ತರಲಾಯಿತು. ಈ ವೇಳೆ ಆಗಮನಕ್ಕೆ ಮುನ್ನವೇ ಭಕ್ತರಿಂದ ಸಾಮೂಹಿಕವಾಗಿ ನಮೋಕಾರ ಮಂತ್ರ ಪಠಣ ನಡೆಯುತ್ತಲಿತ್ತು. ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Ad Widget . Ad Widget .

ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇತ್ತು. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿತ್ತು.

ಜೈನಮುನಿ ದೇಹ 9 ಪೀಸ್‌:
ಜೈನಮುನಿಯನ್ನು ಕರೆಂಟ್‌ ಶಾಕ್‌ ನೀಡಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಅವರ ದೇಹವನ್ನು 9 ತುಂಡುಗಳನ್ನಾಗಿ ಮಾಡಿ ಖಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆ ಬಾವಿಗೆ ಹಾಕಲಾಗಿತ್ತು. ಜೆಸಿಬಿ ಮೂಲಕ ಕೊಳವೆಬಾವಿಯನ್ನು ಅಗೆಯುತ್ತಾ ಹೋದಾಗ 30 ಅಡಿ ಆಳದಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ದೇಹದ 9 ಭಾಗಗಳು ಪತ್ತೆಯಾಗಿದ್ದವು. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆಯನ್ನು ಕತ್ತರಿಸಿ ಹಾಕಿದ್ದರು.

ಆಪ್ತನಿಂದಲೇ ಕೊಲೆ ಆರೋಪ:
ಈ ಕೊಲೆಯ ಹಿಂದೆ ಇರುವ ಪ್ರಮುಖ ಆರೋಪಿ ನಾರಾಯಣ ಮಾಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಬಹಳ ಆಪ್ತನಾಗಿದ್ದ. ಈತ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯವರ ವಿಶ್ವಾಸವನ್ನು ಗಳಿಸಿದ್ದ. ಅಲ್ಲದೆ, ತನ್ನ ಕಷ್ಟಗಳನ್ನು ಹೇಳಿಕೊಂಡು ಹಣವನ್ನು ಪಡೆದಿದ್ದ ಎನ್ನಲಾಗಿದೆ. ಕೊನೆಗೆ ಸ್ವಾಮೀಜಿ ಹಣವನ್ನು ವಾಪಸ್‌ ಕೇಳಿದಾಗ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈತನ ಆಪ್ತ ಹುಸೇನ್‌ ಡಲಾಯತ್‌ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ.

ರಾತ್ರಿ ಇಡೀ ಪೊಲೀಸರಿಗೆ ತಪ್ಪು ಮಾಹಿತಿ:
ತನಿಖೆ ಸಂದರ್ಭದಲ್ಲಿ ಶುಕ್ರವಾರ (ಜುಲೈ 7) ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿ ಶವವನ್ನು ಎಲ್ಲಿ ಬಿಸಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು. ಒಂದು ಬಾರಿ, ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಹೀಗಾಗಿ ಶನಿವಾರ ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕೊನೆಗೂ ಶುಕ್ರವಾರ ಸಂಜೆಯೇ ಮೃತದೇಹ ಪತ್ತೆಯಾಯಿತು.

Leave a Comment

Your email address will not be published. Required fields are marked *