ಸಮಗ್ರ ನ್ಯೂಸ್ : ಮರಣದ ಮಾರ್ಗ ಎಂದೇ ಕರೆಸಿಕೊಂಡಿರುವ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳಿದ್ದು ಇದೀಗ ಹಲವು ಭೀಕರ ಅಪಘಾತಗಳು ನಡೆದಿವೆ. ತಡವಾಗಿಯಾದರೂ ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತೊಡಗಿದೆ. ಇದರ ಮಧ್ಯೆ, ಈ ರಸ್ತೆಯಲ್ಲಿ ಸಂಚರಿಸುವ ಕೆಲವರಿಗೆ 1,000 ರೂಪಾಯಿಗಳ ಬರೆ ಎಳೆಯಲು ಸರ್ಕಾರ ನಿರ್ಧರಿಸಿದೆ.
ಕೆಲವರಿಗೆ 1000 ರೂಪಾಯಿ ಫೈನ್ ವಿಧಿಸಲು ಸರ್ಕಾರವು ನಿರ್ಧರಿಸಿದ್ದು, ಅವರಿಗೆ ವೇಗದ ಮಿತಿಯ ಗಡಿ ಅಳವಡಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಅಂದರೆ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ರಸ್ತೆಯಲ್ಲಿ ಸ್ಪೀಡ್ ಲಿಮಿಟ್ 100 ಕಿಮೀ.ಗೆ ಸೀಮಿತಗೊಳಿಸಿದ್ದು, ಈ ಬಗ್ಗೆ ಅವರು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಮೈಸೂರು ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಂಡ ಬಳಿಕ ನೂರಾರು ಅಪಘಾತಗಳಿಂದ ಸಾಕಷ್ಟು ಸಾವುನೋವುಗಳು ಸಂಭವಿಸಿದ್ದು, ಈಗ ರಸ್ತೆ ಪರಿಶೀಲನೆ ನಡೆಸಿದ್ದ ಎಡಿಜಿಪಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳನ್ನು ಪಟ್ಟಿ ಮಾಡಿದ್ದರು. ಅದರ ಒಂದು ಭಾಗವಾಗಿ ರಸ್ತೆಯಲ್ಲಿ ವೇಗ ಮಿತಿಯ ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಅಲ್ಲದೇ ರಾಮನಗರ ಜಿಲ್ಲೆಯಲ್ಲಿ ಸ್ಪೀಡ್ ರೆಡಾರ್ ಗನ್ ಅಳವಡಿಸಿ ವೇಗ ನಿಯಂತ್ರಣ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ಮುಂದೆ 100 ಕಿಲೋಮೀಟರ್ ಗೆ ಮೀರಿದ ವೇಗದಲ್ಲಿ ಚಲಿಸಿದರೆ, 1,000 ರೂ. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಕೂಡಾ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೊ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ನಿರ್ಧಾರಕ್ಕೆ ಕೆಲವರು ಮೆಚ್ಚುಗೆ ಜತೆಗೆ ಟೀಕೆಗಳೂ ಕೇಳಿಬಂದಿವೆ.