ಸಮಗ್ರ ನ್ಯೂಸ್: ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಜತೆಗೆ, ಪ್ರಕರಣವೊಂದರಲ್ಲಿ ಪತ್ನಿಗೆ ಪತಿ ನೀಡಬೇಕಿದ್ದ ಮಾಸಿಕ ಜೀವನಾಂಶದ ಮೊತ್ತವನ್ನು 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗಳಿಗೆ ಕಡಿಮೆ ಮಾಡಿದ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ವಿವಾಹಕ್ಕೆ ಮುನ್ನ ಉದ್ಯೋಗದಲ್ಲಿದ್ದ ಪತ್ನಿ ಈಗ ಮತ್ತೆ ಕೆಲಸಕ್ಕೆ ಸೇರದಿರಲು ಸಮರ್ಪಕ ಕಾರಣಗಳಿಲ್ಲ. ಆಲಸ್ಯದಿಂದ ಮನೆಯಲ್ಲಿಯೇ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವುದು ಸಮಂಜಸವಲ್ಲ. ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು. ಪೂರಕ ಜೀವನಾಂಶವನ್ನಷ್ಟೇ ಪತಿಯಿಂದ ಪತ್ನಿ ಕೇಳಬಹುದು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿವಾಹದ ನಂತರ ಪತ್ನಿಗೆ ಒಂದು ಮಗು ಜನಿಸಿತ್ತು. ಆದರೆ ಪತ್ನಿಗೆ ಅತ್ತೆ ಮತ್ತು ಅವಿವಾಹಿತ ನಾದಿನಿಯೊಂದಿಗೆ ವಾಸಿಸುವ ಇಚ್ಚೆ ಇರಲಿಲ್ಲ. ಹೀಗಾಗಿ ತನ್ನ ತಾಯಿಯೊಂದಿಗೆ ಪ್ರತ್ಯೇಕ ವಾಸವಾಗಿದ್ದ ಪತ್ನಿ ಜೀವನಾಂಶಕ್ಕಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಪತ್ನಿಗೆ ಮಾಸಿಕ 10 ಸಾವಿರ ರೂಪಾಯಿ ಹಾಗೂ 3 ಲಕ್ಷ ಪರಿಹಾರ ನೀಡುವಂತೆ ಪತಿಗೆ ಆದೇಶ ನೀಡಿತ್ತು. ಇದನ್ನು ಪತಿ ಸೆಷನ್ಸ್ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸೆಷನ್ಸ್ ಕೋರ್ಟ್ ಜೀವನಾಂಶದ ಮೊತ್ತವನ್ನು 10 ಸಾವಿರದಿಂದ 5 ಸಾವಿರಕ್ಕೆ ಇಳಿಸಿತ್ತು. ಪರಿಹಾರದ ಮೊತ್ತವನ್ನು 3 ಲಕ್ಷದಿಂದ 2 ಲಕ್ಷಕ್ಕೆ ಇಳಿಸಿತ್ತು.