Ad Widget .

ಸಕಾಲಿಕ ಚಿಂತನೆ| ವಿಧಾನ ಮಂಡಲ ಅನುಭಾವ ತುಂಬಿದ ಅನುಭವ ಮಂಟಪವಾಗಬೇಕಲ್ಲದೆ ಹುಚ್ಚರ ಸಂತೆಯಾಗಬಾರದು..!

ಸಮಗ್ರ ವಿಶೇಷ: ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ನೇರವಾಗಿ ವೀಕ್ಷಿಸುವ ಯುವ ಜನಾಂಗದ ಮನಸ್ಸುಗಳು ಹೇಗೆ ಯೋಚಿಸಬಹುದು?

Ad Widget . Ad Widget .

ಕನಿಷ್ಠ ಶಾಲೆಗಳಲ್ಲಿ ಇರುವಷ್ಟು ಶಿಸ್ತು ಅಥವಾ ಬಸ್ಸು ರೈಲು ನಿಲ್ದಾಣಗಳಲ್ಲಿ ಇರಬಹುದಾದಷ್ಟು ಶಿಸ್ತು, ಮದುವೆಯ ಆರತಕ್ಷತೆಯಲ್ಲಿ ಇರುವ ಶಿಸ್ತು, ಮತದಾನ ಮಾಡುವಾಗ ಇರುವಷ್ಟು ಶಿಸ್ತು, ಉಪನ್ಯಾಸ – ವಿಚಾರ ಸಂಕಿರಣಗಳಲ್ಲಿ ಇರುವ ಶಿಸ್ತು ಅಥವಾ ಸಿನಿಮಾ ಮಂದಿರಗಳಲ್ಲಿ ಇರಬಹುದಾದಷ್ಟು ಶಿಸ್ತು ಕೂಡ ಇವರಲ್ಲಿ ಇಲ್ಲವಾಯಿತೇ? ಎಂದು ಒಂದು ಕ್ಷಣ ಅನಿಸಬಹುದೇ.

Ad Widget . Ad Widget .

ಎಷ್ಟೊಂದು ವ್ಯವಸ್ಥಿತವಾಗಿ, ಎಷ್ಟೊಂದು ಬುದ್ದಿವಂತ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ಎಷ್ಟೊಂದು ಸಾರ್ವಜನಿಕ ಹಣ ಖರ್ಚು ಮಾಡಿ, ಎಷ್ಟೊಂದು ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು, ಎಷ್ಟೊಂದು ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಇಡೀ ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡು ನಡೆಯುವ ಅಧಿವೇಶನ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಹುದೇ…..

ಇತ್ತೀಚೆಗಷ್ಟೆ ರಾಜ್ಯದ ದೊಡ್ಡ ದೊಡ್ಡ ಆಧ್ಯಾತ್ಮಿಕ ಚಿಂತಕರಿಂದ ಇವರಿಗೆ ಉಪನ್ಯಾಸ – ತರಬೇತಿ ‌- ಕೌನ್ಸಿಲಿಂಗ್ ಕೊಡಿಸಿ ಉತ್ತಮ ನಡವಳಿಕೆ ರೂಪಿಸಿಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಯಿತೆ…..

ಇಡೀ ರಾಜ್ಯದ ಭವಿಷ್ಯ ಗ್ಯಾರಂಟಿಗಳ ಸುತ್ತಲೇ ಸುತ್ತ ಬೇಕೆ. ಮುಂಗಾರು ತಡವಾಗಿ ಪ್ರಾರಂಭವಾಗಿ ಸ್ವಲ್ಪ ಅನಿಶ್ಚಿತತೆ ಕಾಡುತ್ತಿರುವುದು ಪ್ರಮುಖ ವಿಷಯವಲ್ಲವೇ ? ಅದಕ್ಕಾಗಿ ಮಾಡಬೇಕಾದ ಮುಂಜಾಗ್ರತಾ ಕ್ರಮಗಳನ್ನು ಚರ್ಚಿಸುವವರು ಯಾರು ? ಕಲುಷಿತ ನೀರು ಕುಡಿದು ಸಾಯುತ್ತಿರುವವರನ್ನು ಉಳಿಸುವವರು ಯಾರು ? ಪ್ರತಿಭಟನೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳ ಬಗ್ಗೆ ಗಮನಹರಿಸುವವರು ಯಾರು ?

ಅವನು ಲಂಚ ತಿಂದ, ಇವನ ಲಂಚದ ದಾಖಲೆ ನನ್ನ ಬಳಿ ಇದೆ, ಸರ್ಕಾರ ದಿವಾಳಿಯಾಗುತ್ತದೆ, ಸರ್ಕಾರ ಇನ್ನೇನು ಕೆಲವೇ ತಿಂಗಳುಗಳಲ್ಲಿ ಬಿದ್ದು ಹೋಗುತ್ತದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗಳಿಸುವುದಕ್ಕೆ ಯಾವ ಕುತಂತ್ರ ಮಾಡಬೇಕು. ಯಾವ ಪಕ್ಷದ ಯಾರಿಗೆ ಗಾಳ ಹಾಕಿ ಅವರನ್ನು ಸೆಳೆದು ಪ್ರಜಾಪ್ರಭುತ್ವದ ಬೆನ್ನಿಗೆ ಚೂರಿ ಹಾಕಬೇಕು ಇವೇ ಚರ್ಚೆಯ ವಿಷಯಗಳಾದರೆ ನಾವು ಮತದಾನ ಮಾಡುವುದಾದರು ಏಕೆ ?

ಬೆಳಗಿನ ಸಮಯದಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಕ್ರಮಬದ್ಧವಾಗಿ ಪರಿಹಾರ ಸೂಚಕ ಚರ್ಚೆಗಳು ಆಗಬೇಕು, ಮಧ್ಯಾಹ್ನದ ನಂತರ ಪ್ರಶ್ನೋತ್ತರ, ವಾರದ ಕೊನೆಗೆ ಹೊಸ ಕಾನೂನು ಅಥವಾ ತಿದ್ದುಪಡಿ ಅಥವಾ ಸಮಸ್ಯೆಗಳು ಪರಿಹಾರವಾದ ಬಗ್ಗೆ ಮಾಹಿತಿ ಅಥವಾ ಆ ತಕ್ಷಣದ ಸಮಸ್ಯೆಗಳ ಚರ್ಚೆ ಹೀಗೆ ಗುಣಾತ್ಮಕ ಚಿಂತನೆಗಳು ನಡೆದರೆ ಅದಕ್ಕೆ ಒಂದು ಸಾರ್ಥಕತೆ ಇರುತ್ತದೆ.

ಆದರೆ ಈ ಪಕ್ಷಗಳು ಮೊದಲೇ ನಿರ್ಧರಿಸಿ ಅಧಿವೇಶನ ನಡೆಯದೇ ಇರುವಂತೆ ಮಾಡಿ ಹಿಂದಿನ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಸಂಪ್ರದಾಯವನ್ನು ಹಾಗೇ ಮುಂದುವರಿಸಿ ಜನರಿಗೆ ವಂಚಿಸುತ್ತಲೇ ಇವೆ.

ಹಿರಿಯರ ಸಭೆ ಮೇಲ್ಮನೆಯಲ್ಲಿ ಸಹ ಇದೇ ಗೋಳು. ವಿಧಾನಸಭೆಯ ಪ್ರತಿಫಲನವೇ ವಿಧಾನ ಪರಿಷತ್ತು. ಈ ಸಭೆಗಳು ನಿಜಕ್ಕೂ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರೆ ಈಗಿನ‌ ಎಷ್ಟೋ ಸಮಸ್ಯೆಗಳು ಪರಿಹಾರವಾಗಿರುತ್ತಿದ್ದವು. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಶಾಸಕರ ಸಂಬಳ‌ ಸಾರಿಗೆ ಹೆಚ್ಚುವರಿ ವಿಷಯ ಹೊರತುಪಡಿಸಿ ಎಲ್ಲದರಲ್ಲೂ ಭಿನ್ನಾಭಿಪ್ರಾಯ ಜಗಳ ನಡೆಯುತ್ತಲೇ ಇರುತ್ತದೆ.

ಜನ ಪ್ರತಿನಿಧಿಗಳು ಮಾದರಿಯಾಗಬೇಕು, ಆದರ್ಶವಾಗಬೇಕು, ಸ್ಪೂರ್ತಿಯಾಗಬೇಕು,
ವಿಧಾನ ಮಂಡಲ ಅನುಭಾವ ತುಂಬಿದ ಅನುಭವ ಮಂಟಪವಾಗಬೇಕೆ ಹೊರತು ಹುಚ್ಚರ ಸಂತೆಯಾಗಬಾರದು.

ವಿವೇಕಾನಂದ ಎಚ್.ಕೆ.

Leave a Comment

Your email address will not be published. Required fields are marked *