ಸಮಗ್ರ ವಿಶೇಷ: ದಿನನಿತ್ಯದ ಬದುಕಿನ ಬಂಡಿ ಸಾಗಿಸಲು ಕಷ್ಟ ಪಡುತ್ತಿರುವ ಕುಟುಂಬಕ್ಕೆ ಶ್ರೀಮಂತರ ಕಾಯಿಲೆ ಬಂದರೆ ಹೇಗಿರಬೇಡ? ಹುಬ್ಬಳ್ಳಿಯ ಕುಟುಂಬವೊಂದು ಇಂತಹ ಸಂಕಷ್ಟದ ಪರಿಸ್ಥಿತಿ ಅನುಭವಿಸುತ್ತಿದೆ. ಮಗುವಿನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕು. ಹೇಗಾದರೂ ಮಾಡಿ ನನ್ನ ಮಗುವನ್ನು ಬದುಕಿಸಿಕೊಡಿ ಎಂದು ತಾಯಿ ಅಂಗಲಾಚುತ್ತಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಸೈದಾಪುರ ಗ್ರಾಮದ ಶಾಹೀನಬೇಗಂ ಎನ್ನುವವರನ್ನು 4 ವರ್ಷಗಳ ಹಿಂದೆ ಭದ್ರಾಪುರದ ಖಾಜೇಸಾಬ ಅಬ್ಬಿಗೇರಿ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಒಂದು ವರ್ಷ ಉರುಳಿದ ನಂತರ ಶಾಹೀನ ಬೇಗಂ ಅವಳಿ ಜವಳಿ ಮಗುವಿಗೆ ಜನ್ಮ ನೀಡಿದ್ದರು. ಮೊದಮೊದಲು ಆರೋಗ್ಯವಾಗಿದ್ದ ಎರಡೂ ಮಕ್ಕಳು 4 ತಿಂಗಳ ನಂತರ ಆರೋಗ್ಯ ಸಮಸ್ಯೆ ಉಂಟಾಗಿ ಕಿಮ್ಸ್ ಗೆ ದಾಖಲಿಸಿದಾಗ ಎರಡೂ ಮಕ್ಕಳೂ ‘ಥಲಸ್ಸೆಮಿಯಾ ಮೇಜರ್’ ಎಂಬ ಮಾರಣಾಂತಿಕ ಕಾಯಿಲೆ ಇರುವುದು ಪತ್ತೆಯಾಯಿತು. ಈ ವೇಳೆ ಒಂದು ಮಗು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತ್ತು. ಆಗ ವೈದ್ಯರೂ ಆದಷ್ಟು ಬೇಗ ಇನ್ನೊಂದು ಮಗುವಿಗೆ ಚಿಕಿತ್ಸೆಯ ಅವಶ್ಯಕತೆ ಇರುವುದಾಗಿ ತಿಳಿಸಿದರು.
ಮನೆಯಿಂದ ಹೊರಹಾಕಿದ ಪತಿ: ಮಗುವಿಗೆ ಮಾರಣಾಂತಿಕ ಕಾಯಿಲೆ ಇರುವುದು ಗೊತ್ತಾಗುತ್ತಿದ್ದಂತೆ 4 ತಿಂಗಳ ಕಂದಮ್ಮ ಮತ್ತು ಪತ್ನಿ ಶಾಹೀನಬೇಗಂ ಅವರನ್ನು ಪತಿ ಮಹಾಶಯ ಮನೆಯಿಂದ ಹೊರಹಾಕಿದ್ದಾನೆ.
‘ರೋಗದಿಂದ ಬಳಲುತ್ತಿದ್ದ ಒಂದು ಮಗು ಸತ್ತಾಯಿತು. ಇರುವ ಈ ಮಗುವನ್ನು ಸಾಯಿಸಿ ನೀನು ಮನೆಗೆ ಬಾ’ ಎನ್ನುತ್ತಿದ್ದಾನೆ ಎಂದು ಕಣ್ಣೀರುಗರೆಯುತ್ತಿರುವ ಶಾಹೀನಬೇಗಂ, ಕಳೆದ 2 ವರ್ಷಗಳಿಂದ ತಂದೆಯ ಆಸರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಶಾಹೀನಬೇಗಂ ತವರು ಮನೆಯಲ್ಲೂ ಕಿತ್ತು ತಿನ್ನುವ ಬಡತನ. ಇವರ ತಂದೆ ಪೀರಸಾಬ ದೊಡ್ಡಮನಿ ಹುಬ್ಬಳ್ಳಿಯ ಕನ್ನಡಭವನದಲ್ಲಿ ಸೆಕ್ಯೂರಿಟಿ ಗಾರ್ಡ್. ಇವರಿಗೆ ಬರುವ ₹7 ಸಾವಿರ ವೇತನದಲ್ಲಿಯೇ ಜೀವನ ಸಾಗಿಸಬೇಕು.
ಏನಿದು ಕಾಯಿಲೆ?:
‘ಥಲಸ್ಸೆಮಿಯಾ ಮೇಜರ್’ ಆನುವಂಶಿಕವಾಗಿ ಬರುವ ಕಾಯಿಲೆ. ರಕ್ತದಿಂದ ಉಂಟಾಗುವ ಸಮಸ್ಯೆಯಾಗಿದ್ದು, ಕೆಂಪು ರಕ್ತಕಣದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆ ಕುಂಠಿತವಾದರೆ ಈ ರೋಗ ಉಂಟಾಗುತ್ತದೆ. ಸಾಕಷ್ಟು ಹಿಮೋಗ್ಲೋಬಿನ್ ಇಲ್ಲದಿದ್ದಾಗ, ದೇಹದ ಕೆಂಪು ರಕ್ತ ಕಣಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದು ರಕ್ತಹೀನತೆಗೆ ಕಾರಣವಾಗಬಹುದು. ತೀವ್ರವಾದ ರಕ್ತಹೀನತೆ ಉಂಟಾದರೆ ಅಂಗಗಳು ಹಾನಿಯಾಗುತ್ತಾ ಹೋಗುತ್ತವೆ ಮತ್ತು ಸಾವಿಗೂ ಕಾರಣವಾಗಬಹುದು.
ಚಿಕಿತ್ಸೆೆಗೆ ಬೇಕಿದೆ ₹40 ಲಕ್ಷ!!
ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ರಿಯಾಜ್ ಗೆ ಬೋನ್ ಮ್ಯಾರೋ ಟ್ರಾನ್ಸಪ್ಲಾಂಟ್ ಅಗತ್ಯವಿದ್ದು, ಇದಕ್ಕೆೆ ₹40,80,000 ಹಣದ ಅವಶ್ಯಕತೆಯಿದೆ. ಅದು 5 ವರ್ಷದೊಳಗೆ ಈ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಇಲ್ಲದಿದ್ದರೆ ಮಗು ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದಷ್ಟು ಬೇಗನೆ ಶಸ್ತ್ರಚಿಕಿತ್ಸೆ ಮಾಡಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ರಿಯಾಜ್ಗೆ ಪ್ರತಿ ತಿಂಗಳಿಗೊಮ್ಮೆ ರಕ್ತ ನೀಡಲೇಬೇಕು. ಇಲ್ಲದಿದ್ದರೆ ಮಗು ಅಸ್ವಸ್ಥಗೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಔಷಧಿಗಾಗಿ ಪ್ರತಿ ತಿಂಗಳು ₹2-3 ಸಾವಿರ ಖರ್ಚು ಮಾಡಬೇಕಿದೆ.
ಸಹಾಯ ಮಾಡಿ:
ಮಗುವಿನ ಚಿಕಿತ್ಸೆಗೆ ₹40 ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದೆ. ಸಹಾಯ ಮಾಡಲು ಇಚ್ಛಿಸುವವರು ಮೊ: 6362702015 ಸಂಪರ್ಕಿಸಬಹುದು, ಅವರ ಬ್ಯಾಂಕ್ ಖಾತೆಯ ವಿವರ ಈ ರೀತಿ ಇದೆ. SHAHEENBEGUM K ABBIGERI, AC:050118028402, IFSC CODE: CNRB0000501 (CANARABANK).