ಸಮಗ್ರ ನ್ಯೂಸ್: ಕರಾವಳಿ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಎಚ್ಚರವಹಿಸುವಂತೆ ಸೂಚಿಸಲಾಗಿದೆ.
ಜುಲೈ 4 ರಿಂದ ಜುಲೈ 8 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45-55 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಂದಾಗಿ ಕಾರವಾರದ ಹಬ್ಬುವಾಡದಲ್ಲಿರುವ ಸರಕಾರಿ ಬಸ್ ನಿಲ್ದಾಣ ಡಿಪೋ ಕಚೇರಿಯೊಳಗೆ ಮಳೆ ನೀರು ನುಗ್ಗಿತ್ತು. ಡಿಪೋ ಕಚೇರಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ದು ದಾಖಲೆಗಳು ನೀರು ಪಾಲಾಗಿವೆ. ಮಳೆಗೆ ಕಾರವಾರ, ಭಟ್ಕಳ ನಗರ ರಸ್ತೆಗಳು ಜಲಾವೃತಗೊಂಡಿವೆ. ಹೆಚ್ಚಿನ ಮಳೆಯಾದಲ್ಲಿ ಸೋನಾರವಾಡ, ಎಲ್.ಐಸಿ ಕಾಲೋನಿ, ಗುನಿಗಿ ವಾಡದ ಮನೆಗಳಿಗೂ ನೀರು ತುಂಬುವ ಆತಂಕ ಎದುರಾಗಿದೆ.
ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 5ರ ಬೆಳಗ್ಗೆ 8.30 ತನಕ ರೆಡ್ ಅಲರ್ಟ್ ಬಳಿಕ ಜುಲೈ 6ರ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 8ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.