ಸಮಗ್ರ ವಾರ್ತೆ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ನೂತನ ಸರ್ಕಾರ ಆರಂಭವಾಗಿ ಅಧಿವೇಶನ ಶುರುವಾದರೂ ಬಿಜೆಪಿ ಅಧ್ಯಕ್ಷರ ನೇಮಕ ಮಾತ್ರ ಇನ್ನೂ ಬಾಕಿಯಾಗಿ ಉಳಿದಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಅಧ್ಯಕ್ಷ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿದ್ದು, ಈ ಸ್ಥಾನಕ್ಕೆ ಮಹಿಳೆಯೊಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ.
ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ಮುಗಿದಿದ್ದು ತುರ್ತಾಗಿ ನೂತನ ಅಧ್ಯಕ್ಷ ನೇಮಕವಾಗಬೇಕಿದೆ. ನೂತನ ಅಧ್ಯಕ್ಷರ ಸ್ಥಾನಕ್ಕೆ ಹಲವು ನಾಯಕರ ಹೆಸರುಗಳು ಕೇಳಿ ಬಂದಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕರ್ನಾಟಕ ಬಿಜೆಪಿ ಪಡೆ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದು ಅಧಿವೇಶನವೇ ಆರಂಭವಾದರೂ ವಿಪಕ್ಷ ನಾಯಕನಿಲ್ಲದೇ ಕರ್ನಾಟಕ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದೆ. ಇದಲ್ಲದೆ ರಾಜ್ಯಾಧ್ಯಕ್ಷ ಸ್ಥಾನವೂ ಖಾಲಿ ಉಳಿದಿದ್ದು, ಅದು ಕೂಡ ಜರೂರಾಗಿ ಆಗಬೇಕಿದೆ. ಈ ಎರಡು ನೇಮಕಾತಿಗೆ ಬಣ ರಾಜಕೀಯ ಹಿಂದೆ ಕೆಲಸ ಮಾಡುತ್ತಿದ್ದು, ಯಾರನ್ನು ಆಯ್ಕೆ ಮಾಡಬೇಕು ಎಂದು ಹೈಕಮಾಂಡ್ ಗೊಂದಲಕ್ಕೆ ಬಿದ್ದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವಾರು ಹಿರಿಯ ನಾಯಕರ ಹೆಸರುಗಳು ಕೇಳಿಬಂದಿವೆ, ಅವುಗಳಲ್ಲಿ ಆರ್, ಅಶೋಕ್, ಬಸವರಾಜ ಬೊಮ್ಮಾಯಿ, ಸಿಟಿ ರವಿ, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್ ಯತ್ನಾಳ್, ಬಿವೈ ವಿಜಯೇಂದ್ರ, ವಿ ಸೋಮಣ್ಣ, ಮಾಜಿ ಸಚಿವ ಸುನೀಲ್ ಕುಮಾರ್ ಹೀಗೆ ಕೆಲವರ ಹೆಸರು ಮುಂಚೂಣಿಯಲ್ಲಿವೆ, ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪನವರ ಮಾತನ್ನು ತೆಗೆದುಹಾಕುವ ಸಾಧ್ಯತೆ ಇಲ್ಲ.
ಹೀಗಾಗಿ ಬಿಎಸ್ ಯಡಿಯೂರಪ್ಪನವರು ಮಹಿಳೆಯರಿಗೆ ಈ ಬಾರಿ ಅವಕಾಶ ನೀಡಬೇಕು. ಅಲ್ಲದೆ ಕರ್ನಾಟಕ ವಿರೋಧ ಪಕ್ಷದ ನಾಯಕನಾಗಿ ಲಿಂಗಾಯತರಿಗೆ ಕೊಟ್ಟರೆ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸುವಂತೆ ಬಿಎಸ್ ಯಡಿಯೂರಪ್ಪ ಅವರು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರತಿ ಬಾರಿಯೂ ಬಿಜೆಪಿಯಲ್ಲಿ ಜಾತಿ ರಾಜಕಾರಣವೂ ಮುಖ್ಯವಾಗುತ್ತದೆ. ಈ ಬಾರೀಯೂ ಸಹ ಪ್ರಬಲ ಸಮುದಾಯ ಲಿಂಗಾಯತರಿಗೆ ಒಂದು ಹುದ್ದೆಯನ್ನು ನೀಡಲೇ ಬೇಕು. ಇನ್ನೊಂದು ಹುದ್ದೆಯನ್ನು ಒಕ್ಕಲಿಗರಿಗೆ ಒಕ್ಕಲಿಗರಿಗೆ ನೀಡುವ ಚಿಂತನೆ ನಡೆದಿದ್ದು, ಹಲವು ರಾಜ್ಯಗಳಲ್ಲಿನ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆ ಮೋದಿ ಕ್ಯಾಬಿನೆಟ್ ಪುನರ್ ರಚನೆಯಾಗಲಿದ್ದು, ಕರ್ನಾಟಕ ರಾಜ್ಯದ ಕೇಂದ್ರ ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ನಾಲ್ಕು ಜನ ಕೇಂದ್ರ ಸಚಿವರಿದ್ದು, ಆ ಪೈಕಿ ಒಕ್ಕಲಿಗ ಸಮುದಾಯದ ಮಹಿಳಾ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡುವ ಪ್ಲಾನ್‌ಗೆ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗಿದೆ.