ಸಮಗ್ರ ನ್ಯೂಸ್: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು’ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಬಿ.ಜಿ.ಮೋಹನ್ ಕುಮಾರ್ ಹೇಳಿದರು. ಅವರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜನರ ಇಚ್ಚಾಶಕ್ತಿಯ ಕೊರತೆಯಿಂದ ವನಮಹೋತ್ಸವವು ತನ್ನ ಮಹತ್ವವನ್ನು ಕಳೆದುಕೊಂಡು ಒಣ ಮಹೋತ್ಸವ ಆಗುತ್ತಿದೆ. ಪ್ರಾಣಿ ಪಕ್ಷಿಗಳಿಗೆ ಉಳಿಸಲು ಉತ್ತಮ ಹಣ್ಣಿನ ಗಿಡಗಳನ್ನು ನೆಡುವ ಅಗತ್ಯ ಹಿಂದಿನಿಗಿಂತಲೂ ಈಗ ಹೆಚ್ಚಾಗಿ ಆಗಬೇಕು’ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ಶಿವರಾಮ ಶೆಟ್ಟಿ ಮಾತನಾಡಿ ಗಿಡಮರಗಳ ಮಾರಣಹೋಮ ಹೆಚ್ಚಾಗುತ್ತಿರುವುದದಿಂದ ಅರಣ್ಯ ಸಂಪತ್ತು ಇನ್ನಿಲ್ಲವಾಗುತ್ತಿದೆ. ಇದರಿಂದ ಸತತ ಬರಗಾಲದ ದುಸ್ಥಿತಿ ಎದುರಿಸಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರು ತಮ್ಮ ಮನೆ ಜಮೀನುಗಳಲ್ಲಿ ಗಿಡಗಳನ್ನು ನೆಟ್ಟು ಲಾಲನೆ ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸಲು ಸಹಕರಿಸಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಉಮೇಶ್, ಕಾಲೇಜು ಅಭಿವೃದ್ಧಿಯ ಸಮಿತಿಯ ಸದಸ್ಯ ಬಿ.ಎ.ಉಮ್ಮರ್, ಕಾಲೇಜು ಪ್ರಾಂಶುಪಾಲ ಪ್ರೇಮ್ ಸಾಗರ್ ಹಾಗೂ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.