ಸಮಗ್ರ ನ್ಯೂಸ್: ಎಡಿಜಿಪಿ ಅಲೋಕ್ ಕುಮಾರ್,ಮಂಡ್ಯ ಬಳಿಯ ಹೆದ್ದಾರಿಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ಹೆದ್ದಾರಿ ಗಸ್ತು ಹೆಚ್ಚಿಸಿ ಕಳ್ಳತನ , ಅಪರಾಧ ಘಟನೆಗಳಿಗೆ ಕಡಿವಾಣ ಹಾಕಲು ಆದೇಶಿಸಿದ್ದರು ಇದರ ಬೆನ್ನಲ್ಲೇ ದುಷ್ಕರ್ಮಿಗಳು ಕೊಡಗು ಮೂಲದ ವ್ಯಕ್ತಿಯ ಚಿನ್ನದ ಸರವನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.
ಮಡಿಕೇರಿ ಸಮೀಪದ ಅರಪಟ್ಟು ಗ್ರಾಮದ ಇಂಟೀರಿಯರ್ ಡಿಸೈನರ್ ಮುತ್ತಪ್ಪ ಎಂಬ ಯುವಕ ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದಾಗ ಮದ್ದೂರಿನ ಸರ್ವೀಸ್ ರಸ್ತೆಯಲ್ಲಿ ವಿರಾಮ ತೆಗೆದುಕೊಳ್ಳಲು ಕಾರನ್ನು ನಿಲ್ಲಿಸಿದ್ದಾಗ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಮೂವರು ದುಷ್ಕರ್ಮಿಗಳು ಸುಮಾರು 3.50 ಲಕ್ಷ ಮೌಲ್ಯದ 65 ಗ್ರಾಂ ಚಿನ್ನದ ಸರವನ್ನು ಬಲವಂತವಾಗಿ ದೋಚಿಕೊಂಡು ಹೋಗಿದ್ದಾರೆ.
ಬೆಂಗಳೂರಿನಿಂದ ತಮ್ಮ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ರಾತ್ರಿ 11.30ರ ಸುಮಾರಿಗೆ ಸರ್ವೀಸ್ ರಸ್ತೆಯಲ್ಲಿ ಮಡಿಕೇರಿಗೆ ಹೊರಟಿದ್ದ ಮುತ್ತಪ್ಪ. ರಾತ್ರಿ 2.15 ರ ಸುಮಾರಿಗೆ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಸಮೀಪದಲ್ಲಿ ವಿಶ್ರಾಂತಿ ಪಡೆಯಲು ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಮಲಗಿದ್ದರು.
ಆ ಸಮಯದಲ್ಲಿ ಅಲ್ಲಿಗೆ ಮೂವರು ದುಷ್ಕರ್ಮಿಗಳು ಆಗಮಿಸಿ ತಾವು ಪೋಲೀಸರೆಂದು ಹೇಳಿ ಪಾನಮತ್ತರಾಗಿ ಗಾಡಿ ಓಡಿಸುತಿದ್ದೀರಾ ಎಂದು ಚೆಕ್ ಮಾಡಬೇಕಿದೆ ಎಂದು ಕಾರಿನ ಡೋರ್ ತೆಗೆಸಿ ದರೋಡೆ ನಡೆಸಿದ್ದಾರೆ .
ಚಿನ್ನಾಭರಣಗಳನ್ನು ಕೊಡಲು ಮುತ್ತಪ್ಪ ಹಿಂದೇಟು ಹಾಕಿದಾಗ ದುಷ್ಕರ್ಮಿಗಳು ಬಲಗೈ ಹಾಗೂ ಕತ್ತಿನ ಬಳಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ಈ ಸಂದರ್ಭದಲ್ಲಿ ಮುತ್ತಪ್ಪ ಅವರಿಗೆ ಸಣ್ಣ ಗಾಯವೂ ಆಗಿದೆ.
ಮೂವರು ದರೋಡೆಕೋರರು ಅವರ ಕುತ್ತಿಗೆಗೆ ಹಾಕಿಕೊಂಡಿದ್ದ 65 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ನಂತರ ಪೋಲೀಸರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಗಸ್ತು ಪೊಲೀಸರು ಮುತ್ತಪ್ಪ ಅವರಿಗೆ ನೆರವು ನೀಡಿ, ಚಿಕಿತ್ಸೆಗಾಗಿ ಮದ್ದೂರು ಆಸ್ಪತ್ರೆಗೆ ಕರೆದೊಯ್ದರು.
ಮುತ್ತಪ್ಪ ಆರೋಪಿಗಳ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಂಡ್ಯ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಸಿ ಈ ತಿಮ್ಮಯ್ಯ, ದುಷ್ಕರ್ಮಿಗಳು ಕಾಲ್ನಡಿಗೆ ಅಥವಾ ಯಾವ ವಾಹನದಲ್ಲಿ ಬಂದಿದ್ದಾರೆಂದು ಪೋಲೀಸರು ತನಿಖೆ ನಡೆಸುತಿದ್ದಾರೆ. ದೂರುದಾರರು ಇದನ್ನು ಗಮನಿಸಿಲ್ಲ ಎಂದು ಹೇಳಿದರು.
ಹೆದ್ದಾರಿಯಲ್ಲಿ ಗಸ್ತು ಹೆಚ್ಚಿಸಲಾಗಿದ್ದು ಈ ದರೋಡೆ ಪ್ರಕರಣದಲ್ಲಿ ಕೆಲ ಸುಳಿವುಗಳಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.