ಸಮಗ್ರ ನ್ಯೂಸ್: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 10 ದಿನಗಳ ಕಾಲ ಕಲಾಪ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಗ್ಯುದ್ಧ ನಡೆಯುವ ಸಾಧ್ಯತೆ ಇದೆ. ಹಿಂದಿನ ಸರ್ಕಾರದ ಹಗರಣ, ಗ್ಯಾರಂಟಿ ಯೋಜನೆ, ಅಕ್ಕಿ ಬದಲು ಹಣ, ಗ್ಯಾರಂಟಿ ಯೋಜನೆಗಳಿಗೆ ಷರತ್ತು, ವರ್ಗಾವಣೆ ದಂಧೆ, ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಎಪಿಎಂಸಿ ಕಾಯ್ದೆ ಮೊದಲಾದ ವಿಚಾರಗಳ ಬಗ್ಗೆ ಆಡಳಿತ, ಪ್ರತಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ ನಡೆಯುವ ಸಾಧ್ಯತೆ ಇದೆ.
ಆರಂಭದ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಮಂಗಳವಾರದಿಂದ ಮೂರು ದಿನ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಜುಲೈ 7 ರಂದು ಬಜೆಟ್ ಮಂಡನೆಯಾಗಲಿದೆ. 3.35 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.