ಸಮಗ್ರ ನ್ಯೂಸ್: ಬಿಜೆಪಿಯನ್ನು “ವಾಷಿಂಗ್ ಮೆಷಿನ್” ಎಂದು ಕರೆದಿರುವ ಕಾಂಗ್ರೆಸ್, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು “ಡಿಟರ್ಜೆಂಟ್” ಗಳಾಗಿ ಬಳಸಿಕೊಳ್ಳುತ್ತದೆ ಎಂದು ಬಣ್ಣಿಸಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಬಂಡಾಯವನ್ನು ಉಲ್ಲೇಖಿಸಿ ಕಾಂಗ್ರೆಸ್‌ನ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
“ನಿನ್ನೆ ಮುಂಬೈನಲ್ಲಿ ಬಿಜೆಪಿ ವಾಷಿಂಗ್ ಮೆಷಿನ್ ತನ್ನ ಐಸಿಇ (ಆದಾಯ ತೆರಿಗೆ, ಸಿಬಿಐ, ಇಡಿ) ಡಿಟರ್ಜೆಂಟ್‌ನೊಂದಿಗೆ ಮರುಪ್ರಾರಂಭ ಮಾಡಿತು. ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಬಿಜೆಪಿ ಪ್ರೇರಿತ ಸಂಸ್ಕಾರವನ್ನು ಹಾಕಲಾಯಿತು. ಜೂನ್ 23 ರಂದು ಪಾಟ್ನಾದಲ್ಲಿ ಸಭೆ ಸೇರಿದ ಪಕ್ಷಗಳ ಮುಂದಿನ ಸಭೆಯು ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮುಂಬೈ ಕಾರ್ಯಾಚರಣೆಗಳು ವಿರೋಧ ಪಕ್ಷದ ನಿರ್ಣಯವನ್ನು ಬಲಪಡಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಇದೇ ರೀತಿ ವಾಗ್ದಾಳಿ ನಡೆಸಿದ್ದಲ್ಲದೆ, ‘ವಾಶಿಂಗ್ ಮೆಷಿನ್ ಪ್ರತಿಭಟನೆ’ ನಡೆಸಿದ್ದರು. ಆ ಪ್ರತಿಭಟನೆಯಲ್ಲಿ, ಮಮತಾ ಬ್ಯಾನರ್ಜಿ, ವಾಷಿಂಗ್ ಮೆಷಿನ್‌ನ ಮಾದರಿಯಲ್ಲಿ ಕಪ್ಪು ಬಟ್ಟೆಯನ್ನು ಹಾಕಿದರು ಮತ್ತು ಬಿಳಿ ಬಟ್ಟೆಯನ್ನು ಹೊರತೆಗೆದಿದ್ದರು ಮತ್ತು ಅವರ ಬೆಂಬಲಿಗರು “ವಾಷಿಂಗ್ ಮೆಷಿನ್ ಬಿಜೆಪಿ” ಎಂದು ಘೋಷಣೆಗಳನ್ನು ಕೂಗಿದ್ದರು.
ದೇಶದ ಜನಪ್ರಿಯ ಡಿಟರ್ಜಂಟ್ ಪೌಡರ್ ಪ್ಯಾಕೆಟ್‌ನ ಫೋಟೋದೊಂದಿಗೆ ಜೈರಾಮ್ ರಮೇಶ್ ಈ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಪೋಟೋಶಾಪ್ ಮಾಡಲಾಗಿರುವ ಈ ಫೋಟೋದಲ್ಲಿ ನರೇಂದ್ರ ಮೋದಿ ಅವರ ಚಿತ್ರವಿದ್ದು, ಮೋದಿ ವಾಷಿಂಗ್ ಪೌಡರ್.. ಸಾರೇ ದಾಗ್ ಚುಟ್ಕಿಯೋಂ ಮೇ ಧುಲೆ (ಸೆಕೆಂಡುಗಳಲ್ಲಿ ಎಲ್ಲಾ ಕೊಳೆ ಮಾಯ)’ ಎಂದು ಅದರ ಮೇಲೆ ಬರೆಯಲಾಗಿದೆ.