ಕರಾವಳಿಯಲ್ಲಿ ಮುಂದಿನ ಒಂದು ವಾರ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.3ರ ವರೆಗೆ ಯೆಲ್ಲೋ ಅಲರ್ಚ್ ಹಾಗೂ ಜು.4 ಮತ್ತು 5ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ಜಿಲ್ಲೆಗಳಲ್ಲಿ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಸಮುದ್ರತೀರದ ನಿವಾಸಿಗಳು ಮತ್ತು ಮೀನುಗಾರರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜುಲೈ 1ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ ಜುಲೈ 2ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ.
ಗುರುವಾರ ಮತ್ತು ಶುಕ್ರವಾರ ದ.ಕ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 38.60 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 23.80, ಬ್ರಹ್ಮಾವರ 26, ಕಾಪು 29, ಕುಂದಾಪುರ 46.10, ಬೈಂದೂರು 71.50, ಕಾರ್ಕಳ 27.70 ಮತ್ತು ಹೆಬ್ರಿ 26 ಮಿ.ಮೀ. ಮಳೆ ದಾಖಲಾಗಿದೆ.