ಸಮಗ್ರ ನ್ಯೂಸ್: ದ.ಕೊರಿಯಾದ ಬುಸಾನ್ ನಲ್ಲಿ ನಡೆದ 11ನೇ ಆವೃತ್ತಿಯ ಪುರುಷರ ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಪೂರ್ಣ ಪ್ರಾಬಲ್ಯ ಮೆರೆದು ಭಾರತ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇಂದು ನಡೆದ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿದ ಸ್ಟಾರ್ ರೇಡರ್ ಪವನ್ ಕುಮಾರ್ ಸೆಹ್ರಾವತ್ ಸಾರಥ್ಯದ ಟೀಮ್ ಇಂಡಿಯಾ 42-32 ಅಂಕಗಳಿಂದ ಅಪಾಯಕಾರಿ ಹಾಗೂ ಬದ್ಧ ಎದುರಾಳಿ ಇರಾನ್ ತಂಡವನ್ನು ಬಗ್ಗು ಬಡಿದು ಟ್ರೋಫಿ ಮುಡಿಗೇರಿಸಿಕೊಂಡಿದೆ.
ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿರುವ ಭಾರತ ತಂಡ ದಾಖಲೆಯ ಎಂಟನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ಕೂಟದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಭಾರತ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವುದು, ಕಬಡ್ಡಿ ಕ್ರೀಡೆಯಲ್ಲಿ ಭಾರತದ ತಂತ್ರಗಾರಿಕೆ, ಚಾಕಚಕ್ಯತೆ ಹಾಗೂ ಅನುಭವಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಲೀಗ್ ಹಂತದ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತ ತಂಡ ಇರಾನ್ ಎದುರು 33-28 ಅಂಕಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತ್ತು. ಈ ಬಾರಿ ಪಾಕಿಸ್ತಾನ ಈ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. 2017ರಲ್ಲಿ ನಡೆದಿದ್ದ 10ನೇ ಆವೃತ್ತಿಯ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿತ್ತು.
ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಪಾಲ್ಗೊಂಡ ತಂಡಗಳ ಸಂಖ್ಯೆ ಕಡಿಮೆ. 10ನೇ ಆವೃತ್ತಿಯಲ್ಲಿ ಒಟ್ಟು 10 ತಂಡಗಳು ಸ್ಪರ್ಧೆಯಲ್ಲಿದ್ದವು. ಈ ಬಾರಿ ಭಾರತ, ಇರಾನ್, ಆತಿಥೇಯ ದಕ್ಷಿಣ ಕೊರಿಯಾ, ಜಪಾನ್, ಚೈನೀಸ್ ತೈಪೆ ಮತ್ತು ಹಾಂಕಾಂಗ್ ತಂಡಗಳು ಪಾಲ್ಗೊಂಡಿದ್ದವು. ರನ್ನರ್ಸ್ ಅಪ್ ಸ್ಥಾನ ಪಡೆದ ಇರಾನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಅಚ್ಚರಿಯ ಪ್ರದರ್ಶನ ನೀಡಿದ ಚೈನೀಸ್ ತೈಪೆ ತಂಡ ಮೊತ್ತ ಮೊದಲ ಬಾರಿ 3ನೇ ಸ್ಥಾನ ಅಲಂಕರಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.