ಸಮಗ್ರ ನ್ಯೂಸ್: ತಡೆರಹಿತ ಮಾತುಗಳಿಂದಲೇ ವೀಕ್ಷಕರನ್ನು ಮೋಡಿ ಮಾಡುತ್ತಿದ್ದ ಮಾಸ್ಟರ್ ಆನಂದ್‌ಗೆ ರಿಯಲ್ ಎಸ್ಟೇಟ್ ಕಂಪನಿಯೊಂದು ಮೋಸ ಮಾಡಿದೆ. ಈ ಸಂಬಂಧ ನಟ-ನಿರೂಪಕ ಮಾಸ್ಟರ್ ಆನಂದ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮಾಸ್ಟರ್ ಆನಂದ್ ಸೈಟ್ ಒಂದನ್ನು ಖರೀದಿಸಿದ್ದರು. ಬೆಂಗಳೂರಿನ ಕೊಮ್ಮಘಟ್ಟ ಪ್ರಾಂತ್ಯದ ರಾಮಸಂದ್ರ ಹಳ್ಳಿಯಲ್ಲಿ ಮಲ್ಟಿ ವೆಂಚರ್ಸ್ ಲೀಪ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯಿಂದ ಸೈಟ್ ಖರೀದಿ ಬಗ್ಗೆ ಒಪ್ಪಂದ ಆಗಿತ್ತು.
2021ರಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಮಾಸ್ಟರ್ ಆನಂದ್ ನಡುವೆ ನಡೆದ ಮಾತುಕತೆಯ ಅನ್ವಯ, ಸುಮಾರು 200 ಚದರ ಅಡಿ ಅಳತೆಯ ಸೈಟ್ ಅನ್ನು ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದೇ ಸೈಟ್ ಅನ್ನು ರಿಯಲ್ ಎಸ್ಟೇಟ್ ಸಂಸ್ಥೆ ಬೇರೆಯವರಿಗೆ ಮಾರಿದ್ದು, ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಾಸ್ಟರ್ ಆನಂದ್ ಹಾಗೂ ‘ಮಲ್ಟಿ ವೆಂಚರ್ಸ್ ಲೀಪ್’ ರಿಯಲ್ ಎಸ್ಟೇಟ್ ಸಂಸ್ಥೆ ನಡುವೆ 70 ಲಕ್ಷ ರೂ. ಮಾತುಕತೆ ನಡೆದಿತ್ತು. ಆರಂಭದಲ್ಲಿ 18.5 ಲಕ್ಷ ರೂ. ಹಣವನ್ನು ಮುಂಗಡ ಹಣವಾಗಿ ನೀಡಿದ್ದರು. ಇದೇ ವೇಳೆ ಆನಂದ್ ಖರೀದಿಸಿದ್ದ ಸೈಟ್ ಅನ್ನು ಅವರಿಗೆ ಗೊತ್ತಿಲ್ಲದೆ ಬೇರೆಯವರಿಗೆ ಮಾರಾಟ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಈ ವಿಷಯ ಆನಂದ್ ಗಮನಕ್ಕೆ ಬರುತ್ತಿದ್ದಂತೆ ರಿಯಲ್ ಎಸ್ಟೇಟ್ ಕಂಪನಿಯ ಬಳಿ ವಿಚಾರಿಸಿದ್ದಾರೆ. ಆದರೆ, ಕಂಪನಿ ಇವರಿಗೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಹಣ ಹಿಂತಿರುಗಿಸಿಲ್ಲ. ಹೀಗಾಗಿ ತನಗಾಗಿ ಮೋಸದ ವಿರುದ್ಧ ಚಂದ್ರಾ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಮಾಸ್ಟರ್ ಆನಂದ್ ಅವರಿಂದ ದೂರನ್ನು ಸ್ವೀಕರಿಸಿದ ಚಂದ್ರಾ ಲೇ ಔಟ್ ಪೊಲೀಸರು ಆರೋಪಿಗಳ ವಿರುದ್ಧ FIR ದಾಖಲಿಸಲಾಗಿದೆ.