ಸಮಗ್ರ ನ್ಯೂಸ್: ಗ್ರಾಮ ಲೆಕ್ಕಿಗರ ವರ್ಗಾವಣೆಗಾಗಿ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಾಂಡವಪುರ ತಹಶೀಲ್ದಾರ್ ಕೆ.ಸಿ.ಸೌಮ್ಯ ಗುರುವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳೆದ ನಾಲ್ಕುವರೆಗೆ ತಿಂಗಳಿಂದ ಪಾಂಡವಪುರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಸ್.ಸೌಮ್ಯ ಅವರು ಇದೇ ತಾಲೂಕಿನಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ ನಿರ್ವಹಿಸುತ್ತಿದ್ದ ಮರಿಸ್ವಾಮಿ ಅವರ ಬೇರೆಡೆ ವರ್ಗಾವಣೆ ಮಾಡುವುದಕ್ಕಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಪಾಂಡವಪುರ ತಹಶೀಲ್ದಾರ್ ಕಚೇರಿಯಲ್ಲಿ ಮರಿಸ್ವಾಮಿ ಅವರಿಂದ 40 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ ಪಿ.ಸುನೀಲ್ ಕುಮಾರ್, ಸಬ್ ಇನ್ಸ್ ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಮೋಹನ್ ರೆಡ್ಡಿ, ಪ್ರಕಾಶ್ ಅವರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಸೌಮ್ಯ ಹಿಡಿದಿದ್ದಾರೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ರಾತ್ರಿ 9 ಗಂಟೆಯವರೆಗೂ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದರು.