ಸಮಗ್ರ ನ್ಯೂಸ್: ಚಿನ್ನದ ಅಂಗಡಿಯ ಉದ್ಘಾಟನೆಯ ದಿನ ಗುಂಡ್ಯ ಸಮೀಪದ ಕೆಂಪು ಹೊಳೆಯ ಸಮೀಪ ಮೃತಪಟ್ಟ ನಾಗಪ್ರಸಾದ್ ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಸಹಜ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.
ಐಶ್ವರ್ಯ ಗೋಲ್ಡ್ ಉದ್ಘಾಟನೆಗೂ ಮುನ್ನ ಕಡಬ ನಿವಾಸಿಯಾಗಿರುವ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿ ನಾಗಪ್ರಸಾದ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಕಡಬ ತಾಲೂಕಿನ ಮರ್ದಾಳದ ಮಸೀದಿ ಬಿಲ್ಡಿಂಗ್ ನಲ್ಲಿ ನಾಗಪ್ರಸಾದ್ ಮಾಲೀಕತ್ವದ ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದ ಅಂಗಡಿ ಜೂ.22ರಂದು ಉದ್ಘಾಟನೆಯಾಗಬೇಕಿತ್ತು. ಆದರೆ ಮುಂಜಾನೆ ನಾಗಪ್ರಸಾದ್ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಕೆಂಪುಹೊಳೆ ಸಮೀಪ ಶವವಾಗಿ ಪತ್ತೆಯಾಗಿದ್ದರು.
ಘಟನೆ ಬಗ್ಗೆ ಸಾರ್ವಜನಿಕವಾಗಿ ಹಲವು ಅನುಮಾನಗಳಿದ್ದ ಕಾರಣ ಪೊಲೀಸರು ಕೂಡ ಪೋಸ್ಟ್ ಮಾರ್ಟಮ್ ವರದಿಗಾಗಿ ಕಾಯುತ್ತಿದ್ದರು. ಪೋಸ್ಟ್ ಮಾರ್ಟಮ್ ವರದಿ ಬಂದಿದ್ದು ನಾಗಪ್ರಸಾದ್ ಅಪಘಾತದಿಂದಲೇ ಮರಣಪಟ್ಟಿದ್ದಾರೆ ಎಂದು ದೃಢಪಟ್ಟಿದ್ದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಪಘಾತ ಸ್ಥಳದಲ್ಲಿ ಅನುಮಾನ ಮೂಡಿಸಿದ್ದ ಎರಡು ಹೆಲ್ಮೆಟ್ ಮನೆಯಿಂದಲೇ ತಂದಿರುವ ಬಗ್ಗೆ ತನಿಖೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ.