ಸಮಗ್ರ ನ್ಯೂಸ್: ನೂತನ ಚಿನ್ನದ ಅಂಗಡಿ ಉದ್ಘಾಟನೆಯ ದಿನ ಮಾಲಕ ಅಪಘಾತದಲ್ಲಿ ಮೃತಪಟ್ಟ ಘಟನೆ ಗುರುವಾರದಂದು ಬೆಂಗಳೂರು-ಮಂಗಳೂರು ರಾ.ಹೆದ್ದಾರಿಯ ಗುಂಡ್ಯ ಬಳಿ ಸಂಭವಿಸಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ.
ಈತನ ಮಾಲೀಕತ್ವದಲ್ಲಿ ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಜೂ.22 ರಂದು ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ಶುಭಾರಂಭದ ತಯಾರಿ ನಡೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಜೂ.21 ರಂದು ಆಹ್ವಾನ ಪತ್ರ ಕೊಡಲು ಬೆಳ್ತಂಗಡಿ ಕಡೆ ಹೋಗಿ ಬರುವುದಾಗಿ ಮನೆಯಲ್ಲಿ ಮತ್ತು ಗೆಳೆಯರಲ್ಲಿ ಹೇಳಿ ಹೊಗಿದ್ದ. ಹಾಗೆ ಹೋದಾತ ಸಂಜೆಯಾದರೂ ಮನೆಗೆ ಬಾರದ ಕಾರಣ ಮನೆಯವರು ಹಾಗೂ ಗೆಳೆಯರು ಆತನ ಮೊಬೈಲ್ ಗೆ ಕರೆ ಮಾಡುತ್ತಿದ್ದರು. ಆದರೆ ಆತ ಕರೆ ಸ್ವೀಕರಿಸುತ್ತಿರಲಿಲ್ಲ.

ಆತನ ಮೊಬೈಲ್ ರಾತ್ರಿ 10 ಗಂಟೆಯ ತನಕ ರಿಂಗ್ ಆಗುತ್ತಿದ್ದು ಬಳಿಕ ಸ್ವಿಚ್ ಆಫ್ ಬರುತ್ತಿತ್ತು. ಈ ಬಗ್ಗೆ ಅನುಮಾನಗೊಂಡು ಆತನ ಮನೆಯವರು ಜೂ.21ರ ರಾತ್ರಿ ಕಡಬ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಈ ದೂರಿನ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದಾದ ಬಳಿಕ ಜೂ.22ರ ಮುಂಜಾನೆ ಬೈಕೊಂದು ಗುಂಡ್ಯ ಬಳಿ ಹೆದ್ದಾರಿಯಲ್ಲಿ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿತ್ತು. ಅದನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಕಂದಕದಲ್ಲಿ ಬಿದ್ದಿರುವುದನ್ನು ಕಂಡು ದೇಹವನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆತ ಮೃತಪಟ್ಟಿದ್ದು, ಈ ವೇಳೆ ವಿಚಾರಿಸಿದಾಗ ಆ ಮೃತ ದೇಹ ನಾಪತ್ತೆಯಾಗಿದ್ದ ನಾಗಪ್ರಸಾದ್ ನದ್ದು ಎಂದು ತಿಳಿದುಬಂದಿದೆ.

ಬಳಿಕ ಕಡಬ ಠಾಣೆ ಪೊಲೀಸರು ಮತ್ತು ಸಕಲೇಶಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಸಕಲೇಶಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅನುಮಾನದ ಹುತ್ತ:
ಬೆಳ್ತಂಗಡಿ ಕಡೆ ಹೋಗಿರುವ ನಾಗಪ್ರಸಾದ್ ಗುಂಡ್ಯ ಕಡೆ ಬರಲು ಕಾರಣವೇನು..? ಕರೆ ಯಾಕೆ ಸ್ವೀಕರಿಸಲಿಲ್ಲ..? ಆತನ ಜೊತೆ ಕಾರು ಇದ್ದರು ಬೈಕ್ ನಲ್ಲಿ ಯಾಕೆ ಹೋದ ..? ಅದಲ್ಲದೆ ಆಜಾತಶತ್ರು ನಾಗಪ್ರಸಾದ್ ತನ್ನ ಚಿನ್ನದಂಗಡಿ ಶುಭಾರಂಭದ ಹಿಂದಿನ ದಿನವೇ ಈ ಎಲ್ಲಾ ಘಟನೆಯಾಗಲು ಕಾರಣವೇನು? ಎನ್ನುವುದು ಮನೆಯವರಲ್ಲಿ, ಸಂಬಂಧಿಕರಲ್ಲಿ ಹಾಗೇ ಗೆಳೆಯರಲ್ಲಿ ಅನುಮಾನ ಮೂಡಿಸಿದೆ.
ಅಪಘಾತದ ರೀತಿಯಲ್ಲಿ ಪತ್ತೆ:
ಗುಂಡ್ಯದಿಂದ ಸಕಲೇಶಪುರಕ್ಕೆ ಹೋಗುವ ರಸ್ತೆಯಲ್ಲಿ ಆತನ ಬೈಕ್ ಮತ್ತು ಮೃತದೇಹ ಪತ್ತೆಯಾಗಿದ್ದು, ಬೈಕ್ ರಸ್ತೆ ಬದಿಯಲ್ಲಿರುವ ಸಂಕಕ್ಕೆ ಡಿಕ್ಕಿ ಹೊಡೆದು ಬಳಿಕ ಆತ ಕಂದಕಕ್ಕೆ ಉರುಳಿರಬಹುದು. ಆತನ ದೇಹದಲ್ಲಿ ಅಪಘಾತ ಸಂಭವಿಸಿದ ರೀತಿ ಗಾಯಗಳು ಮೇಲ್ಪಟ್ಟಕ್ಕೆ ಕಂಡುಬರುತ್ತಿದೆ. ಬೈಕ್ ಸಂಕಕ್ಕೆ ಹೊಡೆದು ನಜ್ಜುಗುಜ್ಜಾದ ರೀತಿಯಲ್ಲಿದೆ. ಈ ಕಾರಣ ಪ್ರಾಥಮಿಕ ತನಿಖೆಯಲ್ಲಿ ಅಪಘಾತ ಎಂದು ಕಂಡುಬಂದಿದ್ದು ಈ ಕುರಿತು ತನಿಖೆ ನಡೆಸಲಾಗುವುದು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.