ಸಮಗ್ರ ನ್ಯೂಸ್: ಹಿಂದೂ ಯುವಕ ಜೊತೆಗೆ ಮುಸ್ಲಿಂ ಯುವತಿಯ ಮದುವೆಯನ್ನು ಪೊಲೀಸರು ತಡೆದ ಘಟನೆ ಕೇರಳದ ಕಾಯಂಕುಲಂದಲ್ಲಿ ನಡೆದಿದೆ. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಖಿಲ್ ಮತ್ತು ಅಲ್ಫಿಯಾ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದರು. ಇವರಿಬ್ಬರು ಭಾನುವಾರ ಸಂಜೆ 5 ಗಂಟೆಗೆ ಕೋವಲಂನ ಕೆಎಸ್ ರಸ್ತೆಯಲ್ಲಿರುವ ಮಲವಿಲಾ ಪನಮೂಟ್‌ನಲ್ಲಿರುವ ಶ್ರೀ ಮದನ್ ತಂಪುರಾನ್ ದೇವಸ್ಥಾನವನ್ನು ತಲುಪಿದ್ದಾರೆ ಕಾಯಂಕುಲಂ ಪೊಲೀಸರು ಸ್ಥಳಕ್ಕೆ ಆಗಮಿಸಿ ವರನನ್ನು ಹಿಡಿದು ವಧುವಿನ ಬಳಿ ಹೋಗಲು ಬಿಡಲಿಲ್ಲ. ವಧುವನ್ನೂ ವಾಪಾಸ್ಸು ಕರೆದುಕೊಂಡು ಹೋಗಿದ್ದಾರೆ.
ಮುಸ್ಲಿಂ ಬಾಲಕಿಯ ಕುಟುಂಬದವರು ನೀಡಿದ ನಾಪತ್ತೆ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಗಳು ವಧುವನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದಾರೆ. ಕಾಯಂಕುಲಂ ಮೂಲದ ಅಲ್ಫಿಯಾ ಮತ್ತು ಕೆಎಸ್ ರಸ್ತೆಯ ಕೋವಲಂ ಮೂಲದ ಅಖಿಲ್ ಪ್ರೀತಿಸುತ್ತಿದ್ದರು. ಅಖಿಲ್ ಜೊತೆ ವಿವಾಹಕ್ಕೆ ನಿರ್ಧರಿಸಿದ ನಂತರ ಕಳೆದ ಶುಕ್ರವಾರ ಅಲ್ಫಿಯಾ ಕೋವಲಂಗೆ ಬಂದಿದ್ದಳು.
ವಧುವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವಳು ತನ್ನ ಸ್ವಂತ ಇಚ್ಛೆಯ ಮೇರೆಗೆ ವರನೊಂದಿಗೆ ಹೊರಟು ಹೋಗಿರುವುದಾಗಿ ಮತ್ತು ಅವನೊಂದಿಗೆ ಹೋಗಲು ಬಯಸುವುದಾಗಿ ಹೇಳಿಕೆ ನೀಡಿದ್ದಾಳೆ. ನನ್ನ ಹೇಳಿಕೆಯನ್ನು ದಾಖಲಿಸಿದ ನಂತರ, ಅಲ್ಲಿಗೆ ತಲುಪಿದ ಅಖಿಲ್‌ನೊಂದಿಗೆ ಹೊರಡಲು ನನಗೆ ಅವಕಾಶ ನೀಡಲಾಯಿತು ಎಂದು ವಧು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.