ಸಮಗ್ರ ನ್ಯೂಸ್: ಪುತ್ತೂರುನಲ್ಲಿ ನಡೆದಿದ್ದ ಬ್ಯಾನರ್ ಪ್ರಕರಣದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಡಿವೈಎಸ್ಪಿ ಡಾ|ವೀರಯ್ಯ ಹಿರೇಮಠ ಅವರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಪುತ್ತೂರಿನ ಬಸ್ ನಿಲ್ದಾಣದ ಬಳಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನೊಳಗೊಂಡ ಬ್ಯಾನರ್‌ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಯುವಕರನ್ನು ಪೊಲೀಸರು ಬಂಧಿಸಿ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿಯೇ ಪೊಲೀಸರು ಹಲ್ಲೆ ಮಾಡಿದ್ದರು ಎಂದು, ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಯುವಕರು ಆರೋಪಿಸಿದ್ದರು.
ಬಳಿಕ ಈ ಪ್ರಕರಣ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗಿ ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು.ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಯುವಕ ಅವಿನಾಶ್ ಎಂಬವರ ತಂದೆ ವೇಣುನಾಥ ನರಿಮೊಗರು ಎಂಬವರು ನೀಡಿರುವ ದೂರಿನ ಮೇರೆಗೆ ಡಿವೈಎಸ್ಪಿ ಪುತ್ತೂರು, ಪಿಎಸ್‌ಐ ಪುತ್ತೂರು ಗ್ರಾಮಾಂತರ ಮತ್ತು ಗ್ರಾಮಾಂತರ ಕಾನ್‌ಸ್ಟೇಬಲ್ ಹರ್ಷಿತ್‌ರವರ ವಿರುದ್ಧ ಸೆಕ್ಷನ್ 323,324,506r/w 34ಐಪಿಸಿಯಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿ ಸಂಪ್ಯದ ಆಗಿನ ಎಸ್.ಐ.ಶ್ರೀನಾಥ್ ರೆಡ್ಡಿ ಮತ್ತು ಕಾನ್‌ಸ್ಟೇಬಲ್ ಹರ್ಷಿತ್ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಡಿವೈಎಸ್ಪಿ ವಿರುದ್ಧವೂ ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಘಟನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರು ಭರವಸೆ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. .ಇದೀಗ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರು ಜೂ.16ರಂದು ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಕಾನ್‌ಸ್ಟೇಬಲ್ ಹರ್ಷಿತ್ ಎಂಬವರನ್ನು ಈಗಾಗಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ.