ಸಮಗ್ರ ನ್ಯೂಸ್: ವಿದ್ಯುತ್ ದರ ಹೆಚ್ಚಳ ಖಂಡಿಸಿ ನಾವು ಯಾವುದೇ ಪ್ರತಿಭಟನೆಗೆ ಕರೆ ಕೊಟ್ಟಿಲ್ಲ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಗೋಪಾಲ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಕೇಂದ್ರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಇಆರ್‌ಸಿ ದರ ಪರಿಷ್ಕರಣೆ ಹಾಗು ಉದ್ಯಮಗಳಿಗೆ ಅದರಿಂದಾದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ನಮ್ಮ ವ್ಯಾಪ್ತಿಯಲ್ಲಿ 150 ಸಂಸ್ಥೆಗಳು ಬರುತ್ತವೆ. ನಾವು ಪ್ರತಿಭಟನೆಗೆ ಬೆಂಬಲ ನೀಡಿಲ್ಲ. ನಮ್ಮ ಎಲ್ಲ ಸಂಘಟನೆಗಳ ಜೊತೆ ಮಾತುಕತೆ ನಡೆಸಿ, ಜೂನ್ 22ರಂದು ಕಾರ್ಯನಿರ್ವಹಿಸುವಂತೆ ಸೂಚಿಸಿದ್ದೇವೆ. ಇಂಧನ ಸಚಿವ ಜಾರ್ಜ್ ಅವರನ್ನು ಈಗಾಗಲೇ ನಾವು ಭೇಟಿ ಮಾಡಿದ್ದೇವೆ. ಇಲಾಖೆಯ ಅನೇಕ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ರಾಜ್ಯ ತೆರಿಗೆಯನ್ನು ಶೇ.9 ರಿಂದ ಶೇ. 3ಕ್ಕೆ ಇಳಿಸಲು ಕೋರಿದ್ದೇವೆ ಎಂದರು. ಜೂನ್ 22ರ ಬಂದ್ ಯಶಸ್ವಿಯಾಗುತ್ತೆ ಅನ್ನುವುದು ಅನುಮಾನ. ಕೈಗಾರಿಕೆಗಳ ಬಂದ್ ಯಾವುದೇ ರೀತಿಯಲ್ಲೂ ಇತರ ವಿಭಾಗಗಳು, ಸಾರಿಗೆ, ಶಿಕ್ಷಣ ಇಲಾಖೆಗಳಿಗೂ ಪರಿಣಾಮ ಬೀಳುವುದಿಲ್ಲ. ಇದರಿಂದ ಈ ಬಂದ್ ಕರೆ ವ್ಯರ್ಥವಾಗಲಿದೆ ಎಂದು ಹೇಳಿದರು.
ಉದ್ಯಮ್ ಸರ್ಟಿಫಿಕೇಟ್ ಇರೋರಿಗೆ 85 ಯೂನಿಟ್‌ಗಳವರೆಗೂ 50 ಪೈಸೆ ಡಿಡಕ್ಷನ್ ಕೊಡಲಾಗ್ತಿತ್ತು. ಅದನ್ನು ಮುಂದುವರೆಸಲು ಕೋರಿದ್ದೇವೆ. ಕೆಇಆರ್‌ಸಿ ಪರಿಷ್ಕರಣೆಯಿಂದ ಉದ್ಯಮಗಳಿಗೆ ಭಾರಿ ಹೊಡೆತ ಆಗಿದೆ. ಇಂಧನ ಸಚಿವರಿಂದ ಈ ಕುರಿತ ಮಾಹಿತಿ ಪಡೆಯಲಾಗ್ತಿದೆ. ಮಾಹಿತಿ ಕ್ರೋಡೀಕರಿಸಿ ನಮಗೆ ಹೊರೆಯಾಗದಂತೆ ನೋಡಿಕೊಳ್ತಾರೆ ಎಂಬ ನಂಬಿಕೆ ಇದೆ. ಸರ್ಕಾರ ನಮ್ಮ ಜತೆ ಮಾತುಕತೆ ನಡೆಸೋವರೆಗೂ ನಾವು ಯಾವುದೇ ಬಂದ್ ಮಾಡೋದಿಲ್ಲ ಎಂದರು.