ಸಮಗ್ರ ನ್ಯೂಸ್: ಈಗಾಗಲೇ ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಹಲವು ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ ಬೆಲೆಯು ಸಹ ದಿಢೀರ್ ಏರಿಕೆಯಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ.
ಕೇವಲ ಒಂದು ವಾರದ ಹಿಂದೆ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಚಿಂತಾಜನಕ ಸ್ಥಿತಿಗೆ ಕೊಂಡೊಯ್ದಿತ್ತು. ಇದೀಗ ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು ಹಿಂದೆ ಮುಂದೆ ನೋಡುವಂತಾಗಿದೆ.
ಕೆಜಿಗೆ 80 ರೂಪಾಯಿಗಳಿದ್ದ ಬೀನ್ಸ್ ದರ ಈಗ 120 ರೂಪಾಯಿ ಆಸುಪಾಸಿನಲ್ಲಿದ್ದು, 40 ರೂಪಾಯಿಗಳಿದ್ದ ಕ್ಯಾರೆಟ್ ಈಗ 80 ರೂ. ತಲುಪಿದೆ. ಇನ್ನು 30 ರೂಪಾಯಿ ಇದ್ದ ಟೊಮೊಟೊ 60 ರೂಪಾಯಿ ತಲುಪಿದ್ದು, 50 ರೂಪಾಯಿ ಇದ್ದ ಮೆಣಸಿನ ಕಾಯಿ 80 ರೂಪಾಯಿ ಮುಟ್ಟಿದೆ. ಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದ್ದು ಕೆಜಿಗೆ 180 ರೂ. ಇದ್ದ ಸೇಬಿನ ದರ ಈಗ 220 ರಿಂದ 260 ರೂ. ತಲುಪಿದೆ.