Ad Widget .

ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ|ಐದು ಮಂದಿ ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ

ಸಮಗ್ರ ನ್ಯೂಸ್: ಕೊಡಗಿನಲ್ಲಿ ವೈದ್ಯಕೀಯ ಕ್ಷೇತ್ರ ತೀರಾ ಹಿಂದುಳಿದಿದ್ದು, ಇದು ಆದಷ್ಟು ಶೀಘ್ರವಾಗಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅನುಭವಿ ತಜ್ಞ ವೈದ್ಯರು ಒಟ್ಟಾಗಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಕ್ಕೆ ಪೂರಕವಾಗಿ ತಾನು ಯಾವುದೇ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದು ನಿವೃತ್ತ ಲೆ.ಜ. ಡಾ. ಬಿ.ಎನ್.ಬಿ.ಎಂ. ಪ್ರಸಾದ್ ಅವರು‌ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವದಲ್ಲಿ ಭರವಸೆ ನೀಡಿದರು.
ಮಡಿಕೇರಿಯ ಪತ್ರಿಕಾಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಜನ ಇಲ್ಲಿನ ಪರಿಸರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶ ಸೇವೆಗಾಗಿ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಕೀರ್ತಿ ಕೊಡಗು ಜಿಲ್ಲೆಯದ್ದಾಗಿದೆ. ಕೊಡಗಿನ ಹಿರಿಮೆ ಇಲ್ಲಿಯವರಿಗೆ ತಿಳಿದಿಲ್ಲ.ಆದರೆ ಉತ್ತರ ಭಾರತದ ಜನತೆಗೆ ಕೊಡಗಿನ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಕೊಡಗನ್ನು ದಕ್ಷಿಣದ ಕಾಶ್ಮೀರ ಎಂದು ಬಣ್ಣಿಸಿದ್ದರು. ಇದಕ್ಕೆ ಇಲ್ಲಿನ ಪರಿಸರ ಮುಖ್ಯ ಕಾರಣ. ಅದನ್ನು ಸಂರಕ್ಷಿಸುವ ಕಾರ್ಯವಾಗಬೇಕು ಎಂದು ಬಿ.ಎನ್.ಬಿ.ಎಂ. ಪ್ರಸಾದ್ ಕಿವಿಮಾತು ಹೇಳಿದರು. ತಾನು ಕೊಡಗಿನ ಪತ್ರಕರ್ತರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ಕೊಡಗು ಪತ್ರಕರ್ತರ ಸಂಘ ಮತ್ತಷ್ಟು ಹಲವು ಕಾರ್ಯಕ್ರಮ ಮಾಡಬೇಕೆಂದು ಸಲಹೆ ನೀಡಿದರು.

Ad Widget . Ad Widget .

ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ಪತ್ರಕರ್ತರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗಲಿದೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಒಂದೇ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ನುಡಿದರು.ವಿದ್ಯಾವಂತರ ಅಗತ್ಯವಿದೆ: ದೇಶಕ್ಕೆ ಇಂದು ವಿದ್ಯಾವಂತ ರಾಜಕಾರಣಿಗಳ ಅವಶ್ಯಕತೆಯಿದೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬಂದರೆ ಉತ್ತಮ. ದೇಶಕಟ್ಟುವ ಕೆಲಸ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಪತ್ರಕರ್ತರೂ ಕೂಡಾ ಮುಖ್ಯ. ನಾವೆಲ್ಲರೂ ತಂಡವಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.

Ad Widget . Ad Widget .

ಈಗಾಗಲೇ ತನಗೆ ಹಲವು ಸಂಘ ಸಂಸ್ಥೆಗಳಿAದ ಸನ್ಮಾನ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಸನ್ಮಾನ ಮಾಡುವುದು ಸರಿಯಲ್ಲ. ಐದು ವರ್ಷಗಳ ಬಳಿಕ ತಾನು ಮಾಡಿದ ಅಭಿವೃದ್ಧಿ ಕೆಲಸದ ಆಧಾರದಲ್ಲಿ ಸನ್ಮಾನ ಮಾಡಿದರೆ ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಮಂತರ್ ಗೌಡ ಇದೇ ಸಂದರ್ಭ ತಿಳಿಸಿದರು.
ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ಉತ್ತಮ ಪ್ರಭಾವ ಬೀರಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು. ಇಂದು ಸಮೂಹ ಮಾಧ್ಯಮ ಶಕ್ತಿಶಾಲಿಯಾಗಿದೆ. ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ತಿಳಿಸಿಕೊಡುವ ಕರ್ತವ್ಯ ಪತ್ರಕರ್ತರದ್ದು ಎಂದು ಹೇಳಿದರು
ರೆಡ್ ಕ್ರಾಸ್‌ನ ಕೊಡಗು ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ಪುಟ್ಟ ಜಿಲ್ಲೆಯಾದರೂ ಕೊಡಗಿನಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳಿವೆ. ಎಲ್ಲಾ ಸಮಸ್ಯೆಗಳನ್ನು ಸರ್ಕಾರದಿಂದ ಮಾತ್ರ ನಿವಾರಣೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಬೇಕಿದೆ ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಸಂಘವೆAದರೆ ಅದು ಕೊಡಗು ಪತ್ರಕರ್ತರ ಸಂಘ ಮಾತ್ರ. ಕಳೆದೊಂದು ವರ್ಷದಿಂದ ಸಂಘದಿAದ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪತ್ರಕರ್ತರಿಗೆ ಸರ್ಕಾರದಿಂದ ಆದ್ಯತೆ ಮೇರೆ ನಿವೇಶನ ನೀಡಬೇಕಿದೆ. ಜೊತೆಗೆ ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಒದಗಿಸಬೇಕಿದೆ ಎಂದು ಹೇಳಿದರು.

ಪ್ರಶಸ್ತಿ ವಿತರಣೆ : ಕಾರ್ಯಕ್ರಮದಲ್ಲಿ ವಾರ್ಷಿಕ ಕ್ರೀಡಾ ವರದಿಗೆ ಪ್ರಶಸ್ತಿ ಭಾಜನರಾಗಿದ್ದ ಕನ್ನಡಪ್ರಭ ವರದಿಗಾರ ವಿಘ್ನೇಶ್ ಭೂತನಕಾಡು, ಗ್ರಾಮೀಣ ವರದಿ ಪ್ರಶಸ್ತಿ ಪಡೆದ ಪ್ರತಿನಿಧಿ ವರದಿಗಾರ ಸುರೇಶ್ ಬಿಳಿಗೇರಿ, ಕೃಷಿ ವರದಿಗೆ ವಿಜಯ ಕರ್ನಾಟಕ ವರದಿಗಾರ ಕವನ್ ಕಾರ್ಯಪ್ಪ, ಮಾನವೀಯ ವರದಿಗೆ ಶಕ್ತಿ ಪತ್ರಿಕೆಯ ಕೆ.ಎಸ್. ಮೂರ್ತಿ, ಟಿ.ವಿ. ವಾಹಿನಿ ವಿಭಾಗದಲ್ಲಿ ಪ್ರಶಸ್ತಿ ಪಡೆದ ಟಿವಿ ಒನ್ ಸುದ್ದಿ ವಾಹಿನಿಯ ಪ್ರಸಾದ್ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಅಲ್ಲದೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಕೊಡಗು ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಪತ್ರಕರ್ತರ ಸಂಘದ ಅಧಿಕೃತ ವೆಬ್‌ಸೈಟ್ ಅನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರೆ, ಪತ್ರಕರ್ತರಾದ ಕೆ. ತಿಮ್ಮಪ್ಪ, ರಂಜಿತ್ ಕವಲಪಾರ ನಿರೂಪಿಸಿದರು. ಸಂಘದ ಸಲಹೆಗಾರರಾದ ಅನಿಲ್ ಎಚ್.ಟಿ. ವಂದಿಸಿದರು.

Leave a Comment

Your email address will not be published. Required fields are marked *