ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯ ಅನ್ವಯ ಅಪಾರ್ಮೆಂಟ್ ನಿವಾಸಿಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲವಿತ್ತು. ಅಲ್ಲದೇ ಇನ್ನೂ ಅನೇಕ ಗೊಂದಲಗಳು ವಿದ್ಯುತ್ ಬಳಕೆ ಗ್ರಾಹಕರಲ್ಲಿ ಇದ್ದವು. ಆ ಗೊಂದಲಗಳಿಗೆ ರಾಜ್ಯ ಸರ್ಕಾರ ಸ್ಪಷ್ಠೀಕರಣ ನೀಡಿದೆ. ಅದೇನು ಎನ್ನುವ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಸ್ಪಷ್ಠೀಕರಣದ ನಡವಳಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ವಿದ್ಯುತ್ ಸರಬರಾಜು ಕಂಪನಿಗಳು ಕೋರಿರುವ ಅಂಶಗಳಿಗೆ ಸ್ಪಷ್ಟೀಕರಣ ನೀಡಿದೆ.
Multi Stored Apartmentಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೆ ಎನ್ನುವಂತ ಅಂಶಗಳಿಗೆ ಸರ್ಕಾರವು ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎಂದಿದೆ.
ಇನ್ನೂ ಸರ್ಕಾರದ ಆದೇಶದ ನಂತ್ರ ಹೊಸದಾಗಿ ಗೃಹಬಳಕೆಗಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ, ಬಳಕೆದಾರರಿಗೆ ಗೃಹ ಜ್ಯೋತಿ ಯೋಜನೆ ಅನ್ವಯಿಸಲಿದೆ ಎಂಬ ಪ್ರಶ್ನೆ ಸರ್ಕಾರ ಉತ್ತರಿಸಿದೆ. ಅದೇನೆಂದರೆ ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರ ಸರಾಸರಿ ಬಳಕೆಯು ಮಾಸಿಕ 53 ಯೂನಿಟ್ ಗಳಾಗಿರುವುದರಿಂದ 53 ಯೂನಿಟ್ ಗಳನ್ನೆ ನಿರ್ಧರಿಸಿ, ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವಂತೆ ಸೂಚಿಸಿದೆ. ಈ ಯೋಜನೆಯು ಬಾಡಿಗೆ ಮನೆಗಳಲ್ಲಿ ವಾಸಿತುತ್ತಿರುವ ವಿದ್ಯುತ್ ಬಳಕೆದಾರರಿಗೂ ಅನ್ವಯಿಸುವುದೇ ಎನ್ನುವಂತ ಪ್ರಶ್ನೆಗೂ ಉತ್ತರಿಸಿದ್ದು, ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಜೋಡಣೆ ಮಾಡಿ, ನೋಂದಾಯಿಸುವ ಮೂಲಕ ಸೌಲಭ್ಯವನ್ನು ಪಡೆಯುವಂತೆ ತಿಳಿಸಿದೆ.
ಗೃಹ ಬಳಕೆದಾರರು, ಫಲಾನುಭವಿಗಳು ಯಾವುದಾದರೂ ಮಾಹೆಗಳಲ್ಲಿ ಮಾತ್ರ 200 ಯೂನಿಟ್ ಮಿತಿ ದಾಟಿದರೂ, ಸದರಿ ಯೋಜನೆಯಲ್ಲಿ ಮುಂದುವರೆಯುವವರೆ ಎಂಬುದಕ್ಕೆ ಸ್ಪಷ್ಟೀಕರಣವನ್ನು ಸರ್ಕಾರ ನೀಡಿದ್ದು, 200 ಯೂನಿಟ್ ಗಳ ಬಳಕೆಯ ಮಿತಿಯನ್ನು ಯಾವುದಾದರೂ ಮಾಹೆಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಿ, ಸದರಿ ಯೋಜನೆಯಲ್ಲಿ ಮುಂದುವರೆಯುವುದು ಎಂದು ಸ್ಪಷ್ಟೀಕರಣದಲ್ಲಿ ಹೇಳಿದೆ.
ಇನ್ನೂ 2022-23ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಳಕೆ ದಾಖಲಾಗಿದ್ದಲ್ಲಿ, ಅಂತಹ ಮನೆಗಳ ಕಡಿಮೆ ಅವಧಿಯ ಸರಾಸರಿ ಪರಿಗಣಿಸುವ ವಿಧಾನ ಹೇಗೆ ಎಂಬ ಅನುಮಾನಕ್ಕೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹಬಳಕೆದಾರರ ಸರಾಸರಿ ಬಳಕೆಯು ಮಾಸಿಕ 53 ಯೂನಿಟ್ ಗಳಾಗಿರುವುದರಿಂದ 53 ಯೂನಿಟ್ ಗಳನ್ನೇ ನಿರ್ಧರಿಸಿ, ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು ಎಂದು ತಿಳಿಸಿದೆ.