ಸಮಗ್ರ ನ್ಯೂಸ್: ಅನುದಾನ ಹಂಚಿಕೆಯ ಕೊರತೆಯಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಾಧ್ಯಂತ ಇಂದಿನಾ ಕ್ಯಾಂಟೀನ್ ಉಪಹಾರ ವಿತರಣೆ ಸ್ಥಗಿತಗೊಂಡಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದಂತ ಯೋಜನೆಗೆ ಈಗ ಮತ್ತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮರುಚಾಲನೆ ನೀಡಲಾಗಿದೆ.
ಈ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟ, ತಿಂಡಿ ಜೊತೆಗೆ ಮೊಟ್ಟೆ ವಿತರಣೆಗೂ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿತ್ತು. 2013-18ರ ಅವಧಿಯಲ್ಲಿ ಮಧ್ಯಮ ವರ್ಗದವರು, ದುಡಿಯುವವರು, ಬಡವರ ಹಸಿವಿನ ದಾಹವನ್ನು ಕಡಿಮೆ ದರದ ಊಟ, ತಿಂಡಿ ನೀಗಿಸಿತ್ತು.
ಆದರೇ 2018 ರಿಂದ 23ರ ಅವಧಿಯಲ್ಲಿ ಇದ್ದಂತ ಬಿಜೆಪಿ ಸರ್ಕಾರ ಅವಧಿಯಲ್ಲಿ ಅನುದಾನ, ಟೆಂಡರ್ ಪ್ರಕ್ರಿಯೆ ಸೇರಿದಂತೆ ಇತರೆ ಕಾರಣಗಳಿಂದ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟ, ತಿಂಡಿಯ ವಿತರಣೆ ಸ್ಥಗಿತಗೊಂಡಿತ್ತು.
ಈಗ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಸಿಎಂ ಆಗಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸಿ, ಅಧಿಕಾರದ ಗದ್ದುಗೆ ಹಿಡಿದ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಪುನಚ್ಛೇತನ ನೀಡಿದ್ದರು. ಈಗ ಬಂದ್ ಆಗಿದ್ದಂತ ಇಂದಿರಾ ಕ್ಯಾಂಟೀನ್ ಗಳ ಭಾಗಿಲುಗಳು ತೆರೆದಿವೆ. ತಿಂಡಿ, ಊಟವನ್ನು ಮೂರು ಹೊತ್ತು ವಿತರಿಸಲಾಗುತ್ತಿದೆ.
ಪ್ರತಿ ದಿನ ಮೂರು ಹೊತ್ತು ತಿಂಡಿ, ಊಟವನ್ನು ಇಂದಿರಾ ಕ್ಯಾಂಟಿನ್ ಗಳಲ್ಲಿ ರುಚಿ ಶುಚಿಯೊಂದಿಗೆ ನೀಡಲಾಗುತ್ತಿದೆ. ಇದಲ್ಲದೇ ಇಂದಿರಾ ಕ್ಯಾಂಟೀನ್ ಗಳಲ್ಲಿ ವಾರದಲ್ಲಿ ಮೂರು ದಿನ ಕೋಳಿ ಮೊಟ್ಟೆ ವಿತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಇದು ಆಹಾರ ತಜ್ಞರು ಹಾಗೂ ಬಿಬಿಎಂಪಿ ಸದಸ್ಯರ ಅಭಿಪ್ರಾಯ ಕೂಡ ಆಗಿದೆ.
ಈ ಹಿನ್ನಲೆಯಲ್ಲಿ ಕೆಲವೇ ದಿನಗಳಲ್ಲಿ ವಾರದಲ್ಲಿ ಮೂರು ದಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ತಿಂಡಿ, ಊಟದ ಜೊತೆಗೆ ಕೋಳಿ ಮೊಟ್ಟೆ ವಿತರಣೆ ಕೂಡ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.