ಸಮಗ್ರ ನ್ಯೂಸ್: ಈ ಬಾರಿ ಮಳೆಯ ಆರಂಭದಲ್ಲೇ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು.ರಾಜ್ಯದಲ್ಲಿ ಈ ತಿಂಗಳು 166 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದಾರೆ. ಪ್ರಕರಣಗಳ ಒಟ್ಟು ಸಂಖ್ಯೆ ಎರಡು ಸಾವಿರದ ಗಡಿ ದಾಟಿದ್ದು ಈ ಭಾರಿ ಈಗಾಗಲೇ 70 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 23 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತಪಟ್ಟಿರುವುದು ತಿಳಿದು ಬಂದಿದೆ. ಆದರೆ ಈ ವರ್ಷ ಯಾವುದೇ ಮರಣ ವರದಿಯಾಗಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 1,009 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, 732 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 156, ವಿಜಯಪುರದಲ್ಲಿ 113, ಚಿತ್ರದುರ್ಗದಲ್ಲಿ 91, ಬೆಳಗಾವಿಯಲ್ಲಿ 78, ಧಾರವಾಡದಲ್ಲಿ 71, ಬಳ್ಳಾರಿಯಲ್ಲಿ 69 ಹಾಗೂ ಶಿವಮೊಗ್ಗದಲ್ಲಿ 56 ಪ್ರಕರಣ ವರದಿಯಾಗಿದೆ.
‘ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನೀರು ಶೇಖರಣೆಯಾದಲ್ಲಿ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗಿ, ಡೆಂಗಿ ಜ್ವರಕ್ಕೆ ಕಾರಣವಾಗುತ್ತವೆ. ಈ ಜ್ವರಕ್ಕೆ ಲಸಿಕೆ ಇಲ್ಲದಿರುವುದರಿಂದ ಲಕ್ಷಣದ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.