ಸಮಗ್ರ ನ್ಯೂಸ್: ಮೀಟರ್ ರೀಡರ್ ಮಾಡಿದ ತಪ್ಪು ಗ್ರಹಿಕೆಯಿಂದಾಗಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ರೂ. ಕರೆಂಟ್ ಬಿಲ್ ಅನ್ನು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸದಾಶಿವ ಆಚಾರ್ಯ ಅವರಿಗೆ 7.71 ಲಕ್ಷ ರೂ.ಮೌಲ್ಯದ ಕರೆಂಟ್ ಬಿಲ್ ನೀಡುವ ಮೂಲಕ ಮೆಸ್ಕಾಂ ಮೀಟರ್ ರೀಡರ್ ಶಾಕ್ ಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸದಾಶಿವ ಆಚಾರ್ಯ ತಿಂಗಳಿಗೆ ನಮ್ಮ ಮನೆಯ ಕರೆಂಟ್ ಬಿಲ್ ಸರಾಸರಿ ಮೂರು ಸಾವಿರ ರೂಪಾಯಿ ಬರುತ್ತಿತ್ತು. ಪ್ರತಿ ತಿಂಗಳು ಸರಿಯಾಗಿ ಮೊತ್ತವನ್ನು ಪಾವತ್ತಿಸುತ್ತಿದ್ದೆವು. ಮನೆಗೆ ಬಂದು ಮೀಟರ್ ರೀಡ್ ಮಾಡಿದ ಬಳಿಕ ಮೆಸ್ಕಾಂ ಅಧಿಕಾರಿಯೂ 99,338 ಯೂನಿಟ್ ಬಳಸಲಾಗಿದೆ ಎಂದು ಹೇಳಿ 7,71,072 ಲಕ್ಷ ರೂ. ಮೊತ್ತದ ಬಿಲ್ಅನ್ನು ನೀಡಿ ಹೊರಟು ಹೋದರು.
ಆ ಬಳಿಕ ಮೆಸ್ಕಾಂ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದಾಗ ಎಚ್ಚೆತ್ತ ಅಧಿಕಾರಿಗಳು ತಮ್ಮ ತಪ್ಪನ್ನು ಸರಿ ಮಾಡಿಕೊಂಡು 2,833 ರೂ. ಮೌಲ್ಯದ ಪರಿಷ್ಕೃತ ಬಿಲ್ಅನ್ನು ನೀಡಿದ್ದರು ಎಂದು ಸದಾಶಿವ ಆಚಾರ್ಯ ತಿಳಿಸಿದ್ದಾರೆ.
ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದಯಾನಂದ್ ಪ್ರತಿಕ್ರಿಯಿಸಿ ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್ ಮಾಡಿಸಿ ಬಿಲ್ ವಿತರಿಸಲಾಗುತ್ತದೆ. ಬಿಲ್ಅಲ್ಲಿ ಲೋಪ ಕಂಡು ಬಂದರೆ ಅಂತಹದ್ದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಆದರೂ, ಸಿಬ್ಬಂದಿ ತಿಳಿಯದೆ ಕೊಟ್ಟಿದ್ದಾರೆ. ವಿಚಾರ ತಿಳಿದ ತಕ್ಷಣ ಲೋಪವನ್ನು ಸರಿಪಡಿಸಿ ಪರಷ್ಕೃತ ಬಿಲ್ಅನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.