ಸಮಗ್ರ ನ್ಯೂಸ್: ಪೊಲೀಸರಿಗೆ ಸರಿಯಾದ ಮಾಹಿತಿ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್ ಬಂದ್ ಮಾಡಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಮೌಖಿಕ ಎಚ್ಚರಿಕೆಯನ್ನು ನೀಡಿದೆ.
ಅರ್ಜಿಯ ವಿಚಾರಣಾ ಸಮಯದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಎಚ್ಚರಿಕೆಯನ್ನು ನೀಡಿದೆ. ಫೇಸ್‌ಬುಕ್ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಕಾರಣಕ್ಕೆ ಅರ್ಜಿ ವಿಚಾರಣೆ ವೇಳೆ ಮಂಗಳೂರು ಪೊಲೀಸರು ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದರು. ಪ್ರಕರಣದ ಕುರಿತು ಸರಿಯಾದ ಮಾಹಿತಿಯನ್ನು ಒಂದು ವಾರದಲ್ಲಿ ಒದಗಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಮಂಗಳೂರು ಪೊಲೀಸರಿಗೆ ಸೂಚನೆ ನೀಡಿದ್ದು, ಅರ್ಜಿಯ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಲಾಗಿದೆ.
ಏನಿದು ಪ್ರಕರಣ: ಸೌದಿ ಅರೇಬಿಯಾದಲ್ಲಿ ಬಂಧಿತನಾದ ವ್ಯಕ್ತಿಯ ಪ್ರಕರಣದ ವಿಚಾರವಾಗಿ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಇದಕ್ಕೆ ನ್ಯಾಯಪೀಠ ಸರಿಯಾದ ಮಾಹಿತಿ ನೀಡದಿದ್ದರೆ ಫೇಸ್‌ಬುಕ್ ಬಂದ್ ಮಾಡಿಸಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿತ್ತು.
ಮಂಗಳೂರಿನ ಬಿಕರನಕಟ್ಟೆಯ ಶೈಲೇಶ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. CAA ಮತ್ತು NRCಯನ್ನು ಬೆಂಬಲಿಸಿ ಅವರು 2019ರಲ್ಲಿ ಪೋಸ್ಟ್ ಹಾಕಿದ್ದರು. ಆ ಸಮಯದಲ್ಲಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಇದರಿಂದಾಗಿ ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.
2020ರಲ್ಲಿ ಕಿಡಿಗೇಡಿಗಳು ಮತ್ತೆ ಶೈಲೇಶ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ದೊರೆ ವಿರುದ್ಧ ಪೋಸ್ಟ್ ಹಾಕಿದ್ದರು. ಆಗ ಅವರು ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರನ್ನು ಅಲ್ಲಿನ ದೇಶದ ಕಾನೂನಿನ ಅನ್ವಯ ಬಂಧಿಸಲಾಗಿತ್ತು. ಗಂಡನನ್ನು ಬಿಡುಗಡೆ ಮಾಡುವಂತೆ ಕೋರಿ ಶೈಲೇಶ್ ಪತ್ನಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
15 ವರ್ಷದ ಶಿಕ್ಷೆ: ಶೈಲೇಶ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಸೌದಿ ದೊರೆ ವಿರುದ್ಧ ಪೋಸ್ಟ್ ಹಾಕಿದ್ದ ಆರೋಪಕ್ಕಾಗಿ ಅವರಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೂರು ವರ್ಷಗಳಿಂದ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.
ಘಟನೆ ಕುರಿತು ಸೂಕ್ತ ಮಾಹಿತಿಯನ್ನು ಫೇಸ್‌ಬುಕ್ ನೀಡಬೇಕು. ಸುಳ್ಳು ಪ್ರಕರಣದಲ್ಲಿ ಜೈಲಿನಲ್ಲಿರುವ ವ್ಯಕ್ತಿಯ ಬಿಡುಗಡೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ವರದಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.