ಸಮಗ್ರ ನ್ಯೂಸ್: ಕಾರು-ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ವಿಚಾರವಾಗಿ ಇತ್ತಂಡದವರು ಪರಸ್ಪರ ಮಾತಿನ ಚಕಮಕಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕಾರಿನಲ್ಲಿದ್ದ ಪುತ್ತೂರು ಕೆಮ್ಮಿಂಜೆ ಮರೀಲ್ ನಿವಾಸಿ ನಿತಿನ್ ಪಕ್ಕಳ ನೀಡಿದ ದೂರಿನ ಮೇರೆಗೆ ಬಂಟ್ವಾಳ ಅಮ್ಟೂರು ನಿವಾಸಿ ಸಾಹುಲ್ ಹಮೀದ್ ಎಂಬವರ ಮೇಲೆ ಹಾಗೂ ಸಾಹುಲ್ ಹಮೀದ್ ನೀಡಿದ ದೂರಿನ ಮೇರೆಗೆ ಪುತ್ತೂರಿನ ನಿತಿನ್ ಪಕ್ಕಳ, ಪ್ರಶಾಂತ್ ಶೆಣೈ, ಶ್ರೀರಾಮ್ ಪಕ್ಕಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.14 ರಂದು ನಿತಿನ್ ಪಕ್ಕಳ ಕಾರಿನಲ್ಲಿ ಸ್ನೇಹಿತರಾದ ಪ್ರಶಾಂತ್ ಶೆಣೈ, ಶ್ರೀರಾಮ್ ಪಕ್ಕಳ ಎಂಬವರೊಂದಿಗೆ ಸ್ನೇಹಿತನ ಉತ್ತರಕ್ರಿಯೆ ನಿಮಿತ್ತ ಪುತ್ತೂರಿನಿಂದ – ಮೂಡಬಿದ್ರೆ ಮಿಜಾರು ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿಗೆ ತಲುಪಿದಾಗ ವಾಹನ ದಟ್ಟಣೆಯಿದ್ದು, ನಿಧಾನವಾಗಿ ಕಾರನ್ನು ಚಲಾಯಿಸುತ್ತಿದ್ದು, ಅವರ ಕಾರಿನ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಬಲಬದಿಯಿಂದ ಮುನ್ನುಗ್ಗಿಸಿ, ಕಾರಿನ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಈ ಬಗ್ಗೆ ಟಿಪ್ಪರ್ ಲಾರಿ ಚಾಲಕನ್ನು ಪ್ರಶ್ನಿಸಿದಾಗ ಆತನು ಅವರ ಮಾತನ್ನು ಕೇಳದೆ ಲಾರಿಯನ್ನು ಮುಂದಕ್ಕೆ ಚಲಾಯಿಸಿದನು.
ಆಗ ನಿತಿನ್ ಲಾರಿ ಚಾಲಕನ ಬಾಗಿಲನ್ನು ತೆರೆದು ನಿಲ್ಲಿಸುವಂತೆ ಹೇಳಿದಾಗ ಆತನು ಅವಾಚ್ಯವಾಗಿ ಬೈದಿದ್ದಲ್ಲದೇ, “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಹೇಳುತ್ತಾ ಏಕಾಏಕಿ ಲಾರಿ ಚಾಲಕನು ಲಾರಿಯಲ್ಲಿದ್ದ ಸ್ಕ್ರೂ ಡ್ರಯರ್ ನಿಂದ ಕುತ್ತಿಗೆಗೆ ತಿವಿಯಲು ಯತ್ನಿಸಿದಾಗ ನಿತಿನ್ ರವರು ಎಡಕೈಯಿಂದ ತಡೆದಿದ್ದು, ಅವರ ಕೋಲು ಕೈಗೆ ಸ್ಕ್ರೂ ಡ್ರಯರ್ ತಾಗಿ ಗಾಯವಾಗಿದ್ದು, ಸ್ಕ್ರೂ ಡ್ರಯರ್ ನಿಂದ ನಿತಿನ್ ರವರ ಕುತ್ತಿಗೆಗೆ ತಿವಿಯಲು ಯತ್ನಿಸಿದಾಗ ಎಡ ಕೈಯಿಂದ ತಡೆಯದಿದ್ದಲ್ಲಿ ಲಾರಿ ಚಾಲಕನು ಕುತ್ತಿಗೆಗೆ ಸ್ಕ್ರೂಡ್ರಯರ್ ನಿಂದ ತಿವಿದು ಕೊಲೆ ಮಾಡಲು ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 279, 504, 324, 307 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಸಾಹುಲ್ ಹಮೀದ್ ದೂರು ನೀಡಿದ್ದು, ‘ನಾನು ಟಿಪ್ಪರ್ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಜೂ.14 ರಂದು ನೀರಕಟ್ಟೆಯಿಂದ ಪಿತ್ತಲಗುಡ್ಡೆ ಎಂಬಲ್ಲಿಗೆ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿಗೆ ತಲುಪಿದಾಗ ಕಾರಿನಲ್ಲಿ ಬಂದ ಮೂರು ಜನರು ಹಮೀದ್ ರವರ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ, ಕಾರಿನ ಚಾಲಕನು ಲಾರಿಯ ಡ್ರೈವರ್ ಸೀಟಿನ ಕಡೆಯಿಂದ ಹತ್ತಿ ಲಾರಿಯ ಬಾಗಿಲನ್ನು ತೆರೆದು ಹಮೀದ್ ರವರ ತಲೆಗೆ ಕೈಯಿಂದ ಹೊಡೆದು ಅವರ ಕೈಯಲ್ಲಿದ್ದ ಕಾರಿನ ಕೀಯಿಂದ ಹಮೀದ್ ರವರ ಬಲಕೈಗೆ ಗೀರಿ ಗಾಯವನ್ನುಂಟು ಮಾಡಿದಲ್ಲದೇ ಅವರ ಜೊತೆ ಇದ್ದ ಇಬ್ಬರು ಹಮೀದ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 341, 504, 323, 324, r/w 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.