ಸಮಗ್ರ ನ್ಯೂಸ್: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಂಗಳೂರಿನ ಜಿ.ಆರ್.ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಧ್ರುವ ಅಡ್ವಾಣಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಅಗ್ರ 5ನೇ ರ್‍ಯಾಂಕ್ ಗಳಿಸಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ (ಸಿಬಿಎಸ್‌ಸಿ) ಶೇ 99.4 ಗಳಿಸಿದ್ದ ಧ್ರವ ಅಡ್ವಾಣಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಸೇರುವ ಗುರಿ ಹೊಂದಿದ್ದಾರೆ.
ಕರ್ನಾಟಕದ ಮತ್ತೊಬ್ಬ ವಿದ್ಯಾರ್ಥಿ ಎಸ್.ಎಚ್.ಭೈರೇಶ್ ಅಖಿಲ ಭಾರತ ಮಟ್ಟದಲ್ಲಿ 48ನೇ ರ್‍ಯಾಂಕ್ (710 ಅಂಕಗಳು), ವಿದ್ಯಾರ್ಥಿನಿ ಲಾವಣ್ಯ ಗುಪ್ತಾ 1018 ರ್‍ಯಾಂಕ್ ಪಡೆದಿದ್ದಾರೆ.
ಪರೀಕ್ಷೆ ಬರೆದಿದ್ದ ರಾಜ್ಯದ 1.34 ಲಕ್ಷ ವಿದ್ಯಾರ್ಥಿಗಳಲ್ಲಿ 75248 ಮಂದಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 72262 ಇತ್ತು.